

ತುಮಕೂರು
ನಗರದ ಬಿ.ಎಚ್.ರಸ್ತೆಯ ವಿಭಜಕದಲ್ಲಿ ಬೆಳೆದಿರುವ ಬೇವಿನ ಮರಗಳನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಗುರುವಾರ ಬೆಳಗಿನ ಜಾವ ಕೃತ್ಯ ನಡೆದಿದ್ದು, ಇದರ ಹಿಂದೆ ಜಾಹೀರಾತು ನಾಮಫಲಕ ಹಾಕುವ ಗುತ್ತಿಗೆದಾರರು ಇದ್ದಾರೆಂದು ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.
ನಗರದ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಭದ್ರಂ ಚೌಲ್ಟ್ರಿ ವೃತ್ತದವರೆಗೆ ವೃಕ್ಷಮಿತ್ರ ಸಂಸ್ಥೆ ಕಳೆದ 11 ವರ್ಷದಿಂದ ನೆಟ್ಟು ಪೋಷಿಸಿದ್ದ 14 ಬೇವಿನ ಮರಗಳನ್ನು ಅನುಮತಿ ಪಡೆಯದೆ ಕಡಿಯಲಾಗಿದೆ. ಕಳೆದ 3 ತಿಂಗಳ ಹಿಂದಷ್ಟೇ ಸಿದ್ಧಗಂಗಾ ಡಯಾಗ್ನಾಸ್ಟಿಕ್ಸ್ ಮುಂದೆ ಕೂಡ ಬೇವಿನಮರಗಳನ್ನು ಕಡಿದಿದ್ದು ಅಂದೇ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಪರಿಸರಪ್ರೇಮಿಗಳು ಒತ್ತಾಯಿಸಿದ್ದರು.
ಈ ಟನೆ ಇನ್ನೂ ಹಸಿರಾಗಿರುವಾಗಲೇ 14 ಬೇವಿನ ಮರಗಳನ್ನು ಕತ್ತರಿಸಲಾಗಿದೆ. ಮರಗಳ ರೆಂಬೆಕೊಂಬೆ ಕಡಿದು ತೋಟಗಾರಿಕೆ ಇಲಾಖೆ ಪಕ್ಕದ ದೊಡ್ಡ ಮೋರಿಗೆ ಎಸೆಯಲಾಗಿದೆ. ಮರಗಳ ಹನನ ಕಂಡು ಆಕ್ರೋಶಗೊಂಡ ಪರಿಸರ ಪ್ರೇಮಿಗಳು ಬೆಳ್ಳಂಬೆಳಗ್ಗೆಯೇ ರಸ್ತೆಗಿಳಿದು ಮರಗಳನ್ನು ಕಡಿದಿರುವ ಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.3 ತಿಂಗಳ ಹಿಂದೆಯಷ್ಟೇ ಬಿ.ಎಚ್.ರಸ್ತೆಯಲ್ಲಿ ಮರಗಳನ್ನು ಕಡಿದು ಹಾಕಿದ್ದ ಗುತ್ತಿಗೆದಾರನ ವಿರುದ್ಧ ಈವರೆಗೆ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಮತ್ತೆ ರಸ್ತೆ ವಿಭಜಕದಲ್ಲಿದ್ದ ಮರಗಳನ್ನು ಕತ್ತರಿಸಿ ಹಾಕಲಾಗಿದೆ. ಪಾಲಿಕೆ ಹಾಗೂ ಅರಣ್ಯ ಇಲಾಖೆ ಬೇಜವಾಬ್ದಾರಿತನ ಎದ್ದುಕಾಣುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕರಾಜೇಂದ್ರ ಅವರು ಪರಿಶೀಲನೆ ನಡೆಸಿ, ರಸ್ತೆಯಲ್ಲಿ ಬೆಳೆದಿದ್ದ ಮರಗಳನ್ನು ಕಡಿದಿರುವುದು ಅಕ್ಷಮ್ಯ. ಈ ಹಿಂದೆಯೂ 4 ಮರಗಳನ್ನು ಕಡಿಯಲಾಗಿತ್ತು. ಈ ಮರಗಳನ್ನು ಬೆಳೆಸುವುದು ಸುಲಭದ ಮಾತಲ್ಲ. ಹಾಗಾಗಿ ಮರ ಕಡಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯಿತ್ತರು.
ಸ್ಥಳಕ್ಕೆ ಧಾವಿಸಿದ ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಭಟನಾನಿರತರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಕಳೆದ 3 ತಿಂಗಳ ಹಿಂದೆ ಗುತ್ತಿಗೆದಾರ ಇದೇ ರೀತಿ ಮರಗಳನ್ನು ಕಡಿಸಿದ್ದರು. ಆ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಅರಣ್ಯ ಇಲಾಖೆಗೆ ದೂರು ನೀಡಿದ್ದೆವು. ಆದರೆ, ಕ್ರಮ ಆಗಿಲ್ಲ. ಈ ಬಾರಿ ಕಠಿಣ ಕ್ರಮಕೈಗೊಳ್ಳುವಂತೆ ಮತ್ತೊಮ್ಮೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು. ಕಳೆದ 2020ರಲ್ಲಿ ಪಾಲಿಕೆ ವತಿಯಿಂದ ಜಾಹೀರಾತು ನಾಮಫಲಕಗಳನ್ನು ಅಳವಡಿಸಲು ಟೆಂಡರ್ ಗುತ್ತಿಗೆ ನೀಡಲಾಗಿದೆ. ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಜಾಹೀರಾತು ನಾಮಫಲಕ ಅಳಪಡಿಸುವ ಗುತ್ತಿಗೆಯನ್ನು ಸುಮಾರು 15 ಲಕ್ಷ ರೂ., ಗಳಿಗೆ ನೀಡಲಾಗಿದೆ. ಆದರೆ, ಇವರಿಗೆ ಕಡಿಯಲು ಯಾರೂ ಅನುಮತಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ 11 ವರ್ಷದಿಂದ ಬೆಳೆಸಿದ ಬೇವಿನ ಮರಗಳನ್ನು ಜಾಹೀರಾತು ನಾಮಫಲಕ ಹಾಕುವ ಸಲುವಾಗಿ ಗುತ್ತಿಗೆದಾರ ರಾತ್ರೋರಾತ್ರಿ ಕಡಿಸಿ ಹಾಕಿದ್ದಾರೆ. ಈ ಬಗ್ಗೆ ಪಾಲಿಕೆ ಆಯುಕ್ತೆ, ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. > ಪ್ರೊ.ಸಿದ್ದಪ್ಪ ಅಧ್ಯಕ್ಷ, ವೃಕ್ಷಮಿತ್ರ