ತುಮಕೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

Untitled-2
Published on

ವಿಜಯವಾಣಿ ಸುದ್ದಿಜಾಲ ತುಮಕೂರು
ಸ್ಮಾರ್ಟ್‌ಸಿಟಿ ತುಮಕೂರು ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗಿದೆ. ಕಳೆದ 4 ವರ್ಷಗಳಿಂದ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ತುಮಕೂರು ಬಿಜೆಪಿ ಅಭ್ಯರ್ಥಿ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಪ್ರತಿಪಾದಿಸಿದರು.
ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಭರ್ಜರಿ ಮತಬೇಟೆ ಮುಂದುವರಿಸಿರುವ ಜ್ಯೋತಿಗಣೇಶ್ ಭಾನುವಾರ ನಗರದ ಬನಶಂಕರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬನಶಂಕರಿ, ಶಾಂತಿನಗರ, ಸರಸ್ವತಿಪುರಂ, ಮರಳೂರು ದಿಣ್ಣೆ, ಮರಳೂರು, ಉಪ್ಪಾರಹಳ್ಳಿಗಳಲ್ಲಿ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರದ ಜತೆಗೆ ಕಾರ್ಯಕರ್ತರ ಜತೆ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಮಾನಿಕೆರೆಯನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಭರ್ತಿ ಮಾಡಲಾಗುತ್ತಿದೆ. ಮರಳೂರು, ಗಂಗಸಂದ್ರ ಕೆರೆಗಳಿಗೆ ನೀರು ತುಂಬಿಸಿ ನಗರಾದ್ಯಂತ ಅಂತರ್ಜಲ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಪ್ರತಿ ಬೇಸಿಗೆಯಲ್ಲೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಇತ್ತು. ಈಗ ವರ್ಷದಲ್ಲಿ ಎರಡು ಬಾರಿ ಗೊರೂರು ಜಲಾಶಯದಿಂದ ಹೇಮಾವತಿ ನೀರನ್ನು ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಇವೆಲ್ಲವೂ ನಮ್ಮ ಸಾಧನೆ ಅಲ್ಲವೇ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ವಿಹಾರಿಗಳ ಭೇಟಿ: ತುಮಕೂರು ಅಮಾನಿಕೆರೆಯ ಉದ್ಯಾನದಲ್ಲಿ ವಿಹಾರಿಗಳನ್ನು ಬೆಳ್ಳಂಬೆಳಗ್ಗೆ ಭೇಟಿ ಮಾಡಿ ಜ್ಯೋತಿಗಣೇಶ್ ಮತಯಾಚಿಸಿದರು. ಆ ನಂತರ ಶ್ರೀರಾಮನಗರಕ್ಕೆ ತೆರಳಿ ಮನೆಮನೆ ಭೇಟಿ ಮಾಡಿ ಮತ್ತೊಮ್ಮೆ ಆಶೀರ್ವದಿಸುವಂತೆ ಮನವಿ ಮಾಡಿದರು.
ಮರಾಠರ ಸಭೆ: ನಗರದ ಮರಾಠಾ ಕ್ಷತ್ರಿಯ ಸಮುದಾಯದ ಮುಖಂಡರನ್ನು ಶನಿವಾರ ರಾತ್ರಿ ಭೇಟಿ ಮಾಡಿ ಮತಯಾಚಿಸಿದ ಜ್ಯೋತಿಗಣೇಶ್ ಸಮುದಾಯದವರ ಜತೆಗೆ ಸಭೆ ನಡೆಸಿದರು. ಚಿಕ್ಕಪೇಟೆಯ ಕನ್ಯಕಾ ಪರಮೇಶ್ವರಿ ಹಾಗೂ ಸೋಮೇಶ್ವರಪುರಂನ ವಾಸವಿ ದೇವಾಲಯಕ್ಕೆ ತೆರಳಿ ವಾಸವಿ ಜಯಂತಿಯಲ್ಲಿ ಪಾಲ್ಗೊಂಡು ನಗರದ ಹಿತಕ್ಕೆ ಪ್ರಾರ್ಥಿಸಲಾಯಿತು.
ಬಿರುಸಿನ ಪ್ರಚಾರ: ಜಿಲ್ಲಾಧ್ಯಕ್ಷ ರವಿಶಂಕರ್, ಟೂಡಾ ಮಾಜಿ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಕಾರ್ಪೋರೇಟರ್‌ಗಳಾದ ವೀಣಾ ಮನಹೋರಗೌಡ, ವಿಷ್ಣುವರ್ಧನ, ನಗರಸಭೆ ಮಾಜಿ ಸದಸ್ಯ ಡಿ.ಆರ್.ಬಸವರಾಜು ಸೇರಿ ಹಲವರ ನೇತೃತ್ವದಲ್ಲಿ ನಗರಾದ್ಯಂತ ಜ್ಯೋತಿಗಣೇಶ್ ಪರವಾಗಿ ಪ್ರಚಾರ ನಡೆಸುವ ಮೂಲಕ ಬಿಜೆಪಿ ಅಬ್ಬರದ ಪ್ರಚಾರಕ್ಕೆ ಮುನ್ನುಡಿ ಬರೆಯಿತು.
ಪುತ್ರನ ಪರ ಅಖಾಡಕ್ಕಿಳಿದ ಜಿಎಸ್ಬಿ: ಸಂಸದ ಜಿ.ಎಸ್.ಬಸವರಾಜು ಭಾನುವಾರ ಖುದ್ದು ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕುವ ಮೂಲಕ ಪುತ್ರ ಜ್ಯೋತಿಗಣೇಶ್ ಪರವಾಗಿ ಮತಯಾಚಿಸಿದರು. ಎನ್.ಆರ್.ಕಾಲನಿಯಲ್ಲಿ ತಮ್ಮದೇ ಶೈಲಿಯಲ್ಲಿ ಮತಯಾಚಿಸಿದ ಜಿಎಸ್ಬಿ ಪ್ರಚಾರಕ್ಕೆ ಮತ್ತಷ್ಟು ಮೆರಗುತಂದರು. ಮಾಜಿ ಸಂಸದ ಎಸ್.ಮಲ್ಲಿಕಾರ್ಜುನಯ್ಯ ಪುತ್ರಿ ಕೂಡ ಗಾಂಧಿನಗರದಲ್ಲಿ ಪ್ರಚಾರ ನಡೆಸಿ ಜ್ಯೋತಿಗಣೇಶ್‌ಗೆ ಬೆಂಬಲ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net