ತುಮಕೂರಿನ ಜನತೆಗೆ ತೆರಿಗೆ ಹೊರೆ: ಪಾಲಿಕೆಯಲ್ಲಿ 4.15 ಕೋಟಿ ರೂ. ಉಳಿತಾಯ ಬಜೆಟ್​ ಮಂಡನೆ

1
Published on

ತುಮಕೂರು: ಮೇಯರ್​ ಅವಧಿ ಮುಗಿದು ಮೀಸಲಾತಿಗಾಗಿ ಕಾಯುತ್ತಿರುವ ಮಹಾನಗರ ಪಾಲಿಕೆಯಲ್ಲಿ ಎರಡು ತಿಂಗಳು ತಡವಾಗಿ ಬಜೆಟ್​ ಮಂಡಿಸಲಾಗಿದ್ದು, ನಾಗರಿಕರಿಗೆ ತೆರಿಗೆ ಹೊರೆ ಮತ್ತಷ್ಟು ತಟ್ಟಲಿದೆ.

ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್​ ಸತತ ಎರಡನೇ ವರ್ಷ ಬಜೆಟ್​ ಮಂಡಿಸಿದರು.

ಬೆಳಗ್ಗೆ 11.30ಕ್ಕೆ ಮಂಡನೆಯಾದ ಬಜೆಟ್​ನಲ್ಲಿ ಬಹುತೇಕ ಎಲ್ಲ ಹಳೆಯ ಯೋಜನೆಗಳನ್ನೇ ಮುಂದುವರಿಸಲಾಗಿದೆ, ನಾಗರಿಕರಿಗೆ ತೆರಿಗೆ ಹೊರೆ ಮತ್ತಷ್ಟು ಜಾಸ್ತಿಯಾಗುವ ನಿಟ್ಟಿನಲ್ಲಿ ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ.

ಕಳೆದ ವರ್ಷದ ಬಜೆಟ್​ ಪ್ರತಿಯ ಕಾಪಿ ಪೇಸ್ಟ್​ನಂತಿದ್ದ ಪ್ರತಿಯಲ್ಲಿ 2022&23ನೇ ಸಾಲಿಗೆ 4.15ಕೋಟಿ ರೂ. ಉಳಿತಾಯದ 26 ಪುಟಗಳ ಬಜೆಟ್​ ಪ್ರತಿಯನ್ನು ನಳಿನಾ ಓದಿದರು.

2022&23ನೇ ಸಾಲಿನ ನಿರೀಕ್ಷಿತ ಆದಾಯ 244 ಕೋಟಿ ರೂ., ವಿವಿಧ ಬಾಬ್ತುಗಳಿಗೆ 240 ಕೋಟಿ ರೂ. ಖರ್ಚಿಗೆ ಮೀಸಲಿಡಲಾಯಿತು. ತೆರಿಗೆ ವ್ಯಾಪ್ತಿಯಿಂದ ತಪ್ಪಿಸಿಕೊಂಡಿರುವ ಆಸ್ತಿಗಳು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಆಸ್ತಿಯನ್ನು ಖಾತಾ ಆಂದೋಲನದ ಮೂಲಕ ಸರ್ಕಾರದ ಮಾರ್ಗಸೂಚಿಯಂತೆ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಆದಾಯ ಹೆಚ್ಚಿಸಿಕೊಳ್ಳುವ ಸಂಕಲ್ಪ ಮಾಡಲಾಗಿರುವುದು ವಿಶೇಷ ಎನಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 490ಕ್ಕೂ ಹೆಚ್ಚು ಕೈಗಾರಿಕೆಗಳಿದ್ದು, 80 ಕೈಗಾರಿಕೆಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ, ಶಿಕ್ಷಣ ಸಂಸ್ಥೆಗಳಿಂದಲೂ ನೂರಾರು ಕೋಟಿ ತೆರಿಗೆ ಬಾಕಿಯಿದ್ದು ವಸೂಲಿ ಮಾಡಲಾಗದ ಪಾಲಿಕೆ ನಾಕರಿಕರಿಂದ ಹೆಚ್ಚಿನ ತೆರಿಗೆಗೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಲಿದೆ.

ತುಮಕೂರು ಪ್ರೆಸ್​ಕ್ಲಬ್​ಗೆ ಆಲದ ಮರದ ಪಾರ್ಕ್​ ನಿರ್ವಹಣೆ ಹೊಣೆ ನೀಡಿದಂತೆ ನಗರದ ಉದ್ಯಾನವನ್ನು ನಿರ್ವಹಣೆ ಮಾಡಲು ಬಯಸುವ ಸಂ, ಸಂಸ್ಥೆಗಳಿಗೆ ನೀಡಲು ಬಜೆಟ್​ನಲ್ಲಿ ಅವಕಾಶ ಮಾಡಲಾಗಿದೆ. ಪ್ರತಿಭಾವಂತ ಬಡಮಕ್ಕಳಿಗೆ ಪ್ರೋತ್ಸಾಹ, ಅಂಗವಿಲಕರಿಗೆ ನೆರವು ಯೋಜನೆ, ಪೌರಕಾರ್ಮಿಕರ ಆರೋಗ್ಯಕ್ಕಾಗಿ ಆರೋಗ್ಯ ಕೇಂದ್ರ ಸ್ಥಾಪನೆ, ಮಹಿಳಾ ಸುರಕ್ಷತೆ, ಪೇಪರ್​ ಲೆಸ್​ ಆಡಳಿತ, ಪಾಲಿಕೆ ಆಸ್ತಿ ರಕ್ಷಣೆ ಮತ್ತಿತರರ ಯೋಜನೆ ಮುಂದುವರಿಸಲಾಗಿದೆ. ಕೊಳವೆಬಾವಿ ನಿರ್ವಹಣೆಗೆ ಸ್ಮಾರ್ಟ್​ ಮೀಟರ್​ ಅಳಡಿಸಲಾಗುತ್ತಿದೆ.

ಸಭೆಯಲ್ಲಿ ಮೇಯರ್​ ಬಿ.ಜಿ.ಕೃಷ್ಣಪ್ಪ, ಉಪಮೇಯರ್​ ನಾಜಿಮಾಬಿ, ಶಾಸಕ ಜಿ.ಬಿ.ಜ್ಯೋತಿಗಣೇಶ್​, ಆಯುಕ್ತೆ ರೇಣುಕಾ, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತರು, ಉಪಆಯುಕ್ತರು ಹಾಗೂ ಮುಖ್ಯಲೆಕ್ಕಾಧಿಕಾರಿ ಇದ್ದರು. ಎಲ್ಲ ಸದಸ್ಯರು ಹಾಜರಿದ್ದು ಸರ್ವಾನುಮತದಿಂದ ಬಜೆಟ್​ಗೆ ಒಪ್ಪಿಗೆ ನೀಡಿದರು.

ತೆರಿಗೆ ಹೆಚ್ಚಳಕ್ಕೆ ಸದಸ್ಯರ ತೀವ್ರ ವಿರೋಧ: ಆಸ್ತಿ ತೆರಿಗೆಯನ್ನು ಶೇ.5 ಹೆಚ್ಚಳ ಮಾಡಿರುವ ಕ್ರಮವನ್ನು ಸದಸ್ಯರು ತೀವ್ರವಾಗಿ ವಿರೋಧಿಸಿದರು. ಕಾಂಗ್ರೆಸ್​ ಸದಸ್ಯ ನಯಾಜ್​ ಅಹ್ಮದ್​, ಫರಿದಾಬೇಗಂ, ರಮೇಶ್​ ಮತ್ತಿತರರು ನಮ್ಮ ಒಪ್ಪಿಗೆ ಇಲ್ಲ ಎಂದು ಹರಿಹಾಯ್ದರು. ಪಾಲಿಕೆ ಅಧಿಕಾರಿಗಳು ಅವಾರ್ಡ್​ ಪಡೆಯಲು ತೆರಿಗೆ ಹೆಚ್ಚಿಸುತ್ತಿದ್ದಾರೆ, ಸದಸ್ಯರ ಒಪ್ಪಿಗೆಯೂ ಇಲ್ಲದೆ ಏಕಾಏಕಿ ತೆರಿಗೆ ಹೆಚ್ಚಳದಿಂದ ನಾಗರಿಕರ ಮುಂದೆ ನಾವು ವಿಲನ್​ಗಳಾಗಿದ್ದೇವೆ ಎಂದು ನಯಾಜ್​ ಆಕ್ರೋಶ ಹೊರಹಾಕಿದರು.

ಪಾಲಿಕೆ ಆಡಳಿತ ಶಿಸ್ತಿನಿಂದ ನಡೆದರೆ ನಗರವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯ. ಸರ್ಕಾರದ ಮಾರ್ಗಸೂಚಿಯಂತೆ ತೆರಿಗೆ ಹೆಚ್ಚಳ ಮಾಡಬೇಕಾಗಿರುವುದು ಅನಿವಾರ್ಯವಾಗಿದ್ದರೂ ನಾಗರಿಕರಿಗೆ ಹೊರೆಯಾಗಬಾರದು. ಸದಸ್ಯರ ಸಲಹೆಗಳನ್ನು ಪೂರಕ ಬಜೆಟ್​ನಲ್ಲಿ ಸೇರಿಸಿ. > ಜಿ.ಬಿ.ಜ್ಯೋತಿಗಣೇಶ್​ ಶಾಸಕ

ಮುಂದುವರಿದ ಯೋಜನೆಗಳು... *ವಿಪತ್ತು ನಿರ್ವಹಣೆ, ಪ್ರಕೃತಿ ವಿಕೋಪಕ್ಕೆ 60 ಲಕ್ಷ *ಮನರಂಜನೆ, ಸಾಂಸತಿಕ, ರಾಷ್ಟ್ರೀಯ ಹಬ್ಬಕ್ಕೆ 65 ಲಕ್ಷ *ವಾರ್ಡ್​ ಕಮಿಟಿ ರಚನೆಗೆ 14 ಲಕ್ಷ *ಆಡಿಟ್​, ಕಾನೂನು ಸಲಹೆಗೆ 1.20ಕೋಟಿ *2022&23ನೇ ಸಾಲಿನ ಜನಗಣತಿಗೆ 65 ಲಕ್ಷ *ಪಾಲಿಕೆ ಸದಸ್ಯರ ಪ್ರವಾಸಕ್ಕೆ 30 ಲಕ್ಷ *ರಸ್ತೆ ಅಗಲೀಕರಣಕ್ಕೆ ಭೂಸ್ವಾಧಿನಕ್ಕೆ 10 ಕೋಟಿ ರೂ. *ಪೇಪರ್​ ಲೆಸ್​ ಕಚೇರಿಗೆ 60 ಲಕ್ಷ *ಪೌರಕಾರ್ಮಿಕರಿಗೆ 52 ಮನೆ ನಿರ್ಮಾಣಕ್ಕೆ 1 ಕೋಟಿ ರೂ. *ಅಂಗನವಾಡಿ ಕಟ್ಟಡ ನಿರ್ವಹಣೆಗೆ 25 ಲಕ್ಷ, ಗ್ರಂಥಾಲಯಕ್ಕೆ 10 ಲಕ್ಷ *ಇಂದಿರಾ ಕ್ಯಾಂಟಿನ್​ ನಿರ್ವಹಣೆಗೆ 2 ಕೋಟಿ ರೂ. *ಕಸ ವಿಲೇವಾರಿಗೆ 38ಕೋಟಿ. ಕುಡಿಯುವ ನೀರಿಗೆ 35ಕೋಟಿ ರೂ. 2022&23ನೇ ಸಾಲಿನ ಆಯವ್ಯಯದ ವಿವರ ವಿವರ ಮೊತ್ತ(ಲಕ್ಷಗಳಲ್ಲಿ) ಆರಂಭಿಕ ಶಿಲ್ಕು 3608.05 ಅಂದಾಜು ಸ್ವೀಕೃತಿಗಳು 20811.15 ಒಟ್ಟು ಅಂದಾಜು ಸ್ವೀಕೃತಿಗಳು 24419.20 ಅಂದಾಜು ವೆಚ್ಚಗಳು 24003.25 ಉಳಿತಾಯ 415.94

ನೀರು, ಸ್ವಚ್ಛತೆ, ಬೀದಿದೀಪ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಂಪನ್ಮೂಲಗಳ ಕ್ರೋಡಿಕರಣ, ಸಮರ್ಪಕ ಬಳಕೆ ಜತೆಗೆ ಜನಪರ ಕಾರ್ಯಕ್ರಮಗಳಿರುವ ಬಜೆಟ್​ ಮಂಡಿಸಿದ್ದೇನೆ. > ನಳಿನಾ ಇಂದ್ರಕುಮಾರ್​, ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net