ತುಮಕೂರಿಗೆ ನೀರು ಹರಿಸುತ್ತಿರುವ ವಿಷಯ:ಡಿಸಿ- ರೇವಣ್ಣ ನಡುವೆ ಮಾತಿನ ಜಟಾಪಟಿ

ತುಮಕೂರಿಗೆ ನೀರು ಹರಿಸುತ್ತಿರುವ ವಿಷಯ:ಡಿಸಿ- ರೇವಣ್ಣ ನಡುವೆ ಮಾತಿನ ಜಟಾಪಟಿ
Published on

ಹಾಸನ: ಇಬ್ಬರು ಮಾಜಿ ಸಚಿವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಬಂದರೆ ನಮ್ಮ ವಿರುದ್ಧವೇ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಜಿಲ್ಲಾಧಿಕಾರಿ ವಿರುದ್ಧ ನಾವು ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು
ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ಎಚ್.ಕೆ.ಕುಮಾರಸ್ವಾಮಿ ಅವರು ಬುಧವಾರ ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆೆ ಆಗಮಿಸಿದರು. ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರು ಹರಿಸುತ್ತಿರುವ ವಿಚಾರ ಪ್ರಸ್ತಾಪಿಸುತ್ತಿರುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರವೇಶಿಸುತ್ತಿದ್ದಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು, ಸುದ್ದಿಗಾರರನ್ನು ಕರೆಸಿದ್ದಿರಿ, ಅವರ ಮುಂದೆ ನಾನು ಮಾತನಾಡುವುದಿಲ್ಲ ಎಂದು ಅಲ್ಲಿಂದ ನಿರ್ಗಮಿಸಿದರು. ಇದರಿಂದ ವಿಚಲಿತರಾದ ಮಾಜಿ ಸಚಿವ ರೇವಣ್ಣ ಅವರು, ಕೆಲ ಹೊತ್ತು ಅಲ್ಲೇ ಕುಳಿತು ಬಳಿಕ ಹೊರಗೆ ಬಂದರು. ಮುಖ್ಯದ್ವಾರದಲ್ಲಿ ನಿಂತು ಜಿಲ್ಲಾಧಿಕಾರಿ ಅವರ ಆಪ್ತ ಸಹಾಯಕರನ್ನು ಕರೆದು ‘ಗಂಭೀರ ವಿಷಯದ ಕುರಿತು ಚರ್ಚಿಸುವಾಗ ಹೀಗೆ ಎದ್ದು ನಡೆದರೆ ಏನೆಂದು ತಿಳಿಯಬೇಕು. ಈಗ ಬರುತ್ತಾರಾ? ಇಲ್ಲವಾ ಕೇಳಿ, ಇಲ್ಲದಿದ್ದರೆ ಇಲ್ಲಿಯೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ಅವರು ಮತ್ತೆ ತಮ್ಮ ಛೇಂಬರ್‌ಗೆ ವಾಪಾಸ್ಸಾಗಿ ರೇವಣ್ಣ ಅವರೊಂದಿಗೆ ಎರಡು ನಿಮಿಷ ಮಾತನಾಡಿ ವಾಪಸ್ಸಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ನಮ್ಮ ಜಿಲ್ಲೆಯ ಜನರಿಗೆ ಕುಡಿಯಲು ನೀರಿಲ್ಲದಿರುವಾಗ ಹೇಮಾವತಿ ಜಲಾಶಯದಿಂದ ತುಮಕೂರಿಗೆ ಹೇಗೆ ನೀರು ಬಿಟ್ಟಿದ್ದೀರಿ? ಎಂದು ಕೇಳಲು ಬಂದ ಜನಪ್ರತಿನಿಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ತುಮಕೂರಿಗೆ ನೀರು ಬಿಟ್ಟಿದ್ದಾರೆ. ತುಮಕೂರಿನಲ್ಲಿ ಚುನಾವಣೆ ಗೆಲುವಿಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ. ಜಲಾಶಯದಿಂದ ನೀರು ಬಿಡುವ ಮೊದಲು ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ಜಿಲ್ಲೆಯ ಎಲ್ಲಾ ಶಾಸಕರು ಸಭೆಯಲ್ಲಿ ಹಾಜರಿರಬೇಕು. ಯಾವ ಸಭೆ ನಡೆಸದೆ ಏಕಾಏಕಿ ನೀರು ಬಿಟ್ಟರೆ ಹೇಗೆ ಸಹಿಸಿಕೊಳ್ಳವುದು ಎಂದರು.
25 ವರ್ಷದಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇವೆ. ಮಾಜಿ ಸಚಿವರು ಕಚೇರಿಗೆ ಬಂದರೆ ಹೇಗೆ ವರ್ತಿಸಬೇಕು ಎಂಬ ಪರಿಜ್ಞಾನ ಇಲ್ಲ. ಮಾಧ್ಯಮ ಪ್ರತಿನಿಧಿಗಳು ಕಚೇರಿಯೊಳಗೆ ಬಂದರೆ ಎದ್ದು ಹೋಗುತ್ತಾರೆ. ಇಷ್ಟು ಮಾತ್ರವಲ್ಲದೆ ಹೆದರಿಸಲು ಬಂದಿದ್ದೀರಿ ಎನ್ನುತ್ತಾರೆ. ಈ ಮೊದಲು ಸುದ್ದಿಗಾರರು ಕಚೇರಿಗೆ ಬಂದಿಲ್ಲವೇ. ಜಿಲ್ಲಾಧಿಕಾರಿ ಹಾಗೂ ಶಾಸಕರು ಒಟ್ಟಿಗೆ ಇರುವುದನ್ನು ಫೋಟೋ ತೆಗೆಯುವ ಸ್ವಾತಂತ್ರೃ ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲವೇ ಎಂದು ಜಿಲ್ಲಾಧಿಕಾರಿ ವಿರುದ್ದ ಹರಿಹಾಯ್ದರು.
ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರು ಬಿಟ್ಟಿರುವ ಹಾಗೆ ಜಿಲ್ಲೆಯ ನಾಲೆಗಳಿಗೂ ಹರಿಸಬೇಕು. ಇಲ್ಲವಾದರೆ ಮುಂದಾಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಶ್ರವಣಬೆಳಗೊಳ, ಚನ್ನರಾಯಪಟ್ಟಣ ನಾಲೆ ಮೇಲೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಯಾಕೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಕೇಳಿದರೆ ನಮಗೆ ಗೊತ್ತಿಲ್ಲ. ಜಿಲ್ಲಾಧಿಕಾರಿ ಅವರನ್ನೇ ಕೇಳಿ ಎನ್ನುತ್ತಾರೆ. ಇವರನ್ನು ಕೇಳೋಕೆ ಬಂದರೆ ನಮ್ಮ ಮೇಲೆ ಎಫ್‌ಐಆರ್ ದಾಖಲಿಸುವುದಾಗಿ ಹೆದರಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net