ತುಮಕೂರಲ್ಲಿ ನೀರಿಗೆ ಬರ: ಜಲಸಂಗ್ರಹಾಗಾರದಲ್ಲಿ ಹೇಮೆ ನೀರಿದ್ದರೂ ಬಗೆಹರಿಯದ ಸಮಸ್ಯೆ

02
Published on

ವಿಶೇಷ ವರದಿ ತುಮಕೂರು

ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಹೇಮೆ ನೀರಿದ್ದರೂ ತುಮಕೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ನಗರಕ್ಕೆ 7&8 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಮಳೆಗಾಲದಲ್ಲಿ ಜನರು ಟ್ಯಾಂಕರ್​ ನೀರು ಅವಲಂಬಿಸುವಂತಾಗಿದೆ.

ನಗರದ ಬಹುತೇಕ ವಾರ್ಡ್​ಗಳಿಗೆ ಕುಡಿಯುವ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಗಾರದಲ್ಲಿ ಜುಲೈ ಮಧ್ಯಭಾಗದವರೆಗೆ ಪೂರೈಸುವಷ್ಟು ನೀರಿದೆ. ಆದರೆ, ಕಳೆದ 15 ದಿನಗಳಿಂದ ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಹಾಗಾಗಿ, ಬಡಾವಣೆಗಳಲ್ಲಿ ಖಾಸಗಿ ಟ್ಯಾಂಕರ್​ಗಳ ಓಡಾಟ ಶುರುವಾಗಿದ್ದು ಟ್ಯಾಂಕರ್​ ಒಂದಕ್ಕೆ 400 ರಿಂದ 500 ರೂ.,ಗಳನ್ನು ಜನರು ತೆರುವಂತಾಗಿದೆ.

ಕೆಟ್ಟು ನಿಂತ ಪಂಪು ಮೋಟಾರ್​: ಬುಗಡನಹಳ್ಳಿ ಜಲಸಂಗ್ರಹಾಗಾರದ ಪಂಪ್​ಹೌಸ್​ನಿಂದ ಶೇ.30 ನೀರು ಪೂರೈಸಿದರೆ, ಕುಪ್ಪೂರು ಜಾಕ್​ವೆಲ್​ನಿಂದ ಶೇ.70 ನೀರನ್ನು ಪಿಎನ್​ಆರ್​ ಪಾಳ್ಯದ ಶುದ್ಧೀಕರಣ ಟಕಕ್ಕೆ ನೀರು ಪಂಪ್​ ಮಾಡಿ ಬಳಿಕ ಅಲ್ಲಿಂದ ನಗರಕ್ಕೆ ನೀರು ಪೂರೈಸಲಾಗುವುದು. ತಲಾ 3 ಬೃಹತ್​ ಪಂಪು&ಮೋಟಾರ್​ ಇದ್ದು ಇವುಗಳಲ್ಲಿ ಎರಡು ಕೆಟ್ಟು ನಿಂತಿದ್ದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸ್ಟಾಂಡ್​ಬೈ 1 ಮೋಟಾರ್​ ಇದೆಯಾದರೂ ಎರಡು ಪಂಪುಮೋಟಾರ್​ ಕೆಟ್ಟು ಹೋಗುವವರೆಗೆ ಬಿಟ್ಟಿರುವ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ವಿದ್ಯಾನಗರ ವಾಟರ್​ ವರ್ಕ್ಸ್​ನ ಕಥೆಯೂ ಭಿನ್ನವೇನಲ್ಲ.

ಪಂಪು&ಮೋಟಾರ್​, ಟ್ರಾನ್ಸ್​ ಫಾರ್ಮರ್​ ಕೆಟ್ಟಿದೆ ಎಂದು ಒಂದಲ್ಲ ಒಂದು ಸಬೂಬು ಹೇಳಿ ಜನರಿಗೆ ವಾರಕ್ಕೊಮ್ಮೆ ಕುಡಿಯುವ ನೀರು ಕೊಡಲಾಗುತ್ತಿದೆ. ಖಾಸಗಿ ಪಿಜಿಗಳು, ಹಾಸ್ಟೆಲ್​ಗಳು, ಹೋಟೆಲ್​ಗಳಿಗೆ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯವಾಗುವುದಿಲ್ಲ. ಕೊಳವೆಬಾವಿ ನೀರಿನ ಸಂಪರ್ಕವನ್ನಾದರೂ ಕಲ್ಪಿಸಿ ನೀರು ಒದಗಿಸುವ ಕೆಲವು ವಾಟರ್​ಮನ್​ಗಳ ಹಣದ ದಾಹವು ಬಡಾವಣೆಗಳಲ್ಲಿ ನೀರಿನ ದಾಹ ಹೆಚ್ಚಲು ಕಾರಣವಾಗಿದೆ.

24/7 ಕುಡಿಯವ ನೀರಿನ ಕನಸು?: ಪಾಲಿಕೆಯಲ್ಲಿ 24/7 ಕುಡಿಯುವ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಂಡಿದ್ದು ಈ ಯೋಜನೆ 2 ವರ್ಷಗಳಾದರು ಕನಸಾಗೇ ಉಳಿದಿದೆ. ಜಲಸಂಗ್ರಹಾಗಾರದಲ್ಲಿ ಹೇಮೆ ನೀರಿದ್ದರೂ ಪಂಪು&ಮೋಟಾರ್​ ಸುಟ್ಟುಹೋಗಿದೆ ಎಂಬ ಕಾರಣ ಕೊಡುವ ಅಧಿಕಾರಿಗಳಿಗೆ ಇನ್ನಾದರೂ ಜನಪ್ರತಿನಿಧಿಗಳು ಛಾಟಿ ಬೀಸಬೇಕಿದೆ. ಪಾಲಿಕೆ ಬೇಜವಾಬ್ದಾರಿಯಿಂದ ಬೇಸಿಗೆ ಮುಗಿದು ಮಳೆಗಾಲದಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

15 ದಿನಗಳಿಂದ ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಪಂಪು&ಮೋಟಾರ್​ ಕೆಟ್ಟಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ನಮ್ಮ ವಾರ್ಡ್​ಗಳಲ್ಲಿ ನೀರು ಪೂರೈಕೆಯಲ್ಲಿ ತೀವ್ರ ತೊಂದರೆ ಆಗಿದ್ದು ಜನರ ಆಕ್ರೋಶಕ್ಕೆ ತುತ್ತಾಗುವಂತಾಗಿದೆ. ಪಾಲಿಕೆ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸದೇ ಇದ್ದರೂ ಪ್ರತಿಭಟನೆ ಕುಳಿತುಕೊಳ್ಳುವುದು ಅನಿವಾರ್ಯ. > ಎಚ್​.ಮಲ್ಲಿಕಾರ್ಜುನಯ್ಯ ಪಾಲಿಕೆ ಬಿಜೆಪಿ ಸದಸ್ಯ 300 ಎಂಸಿಎಫ್​ಟಿ ಸಾಮರ್ಥ್ಯದ ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಸದ್ಯ 150 ಎಂಸಿಎಫ್​ಟಿ ಹೇಮೆ ನೀರಿದೆ. ಜುಲೈ ಮಧ್ಯಭಾಗದವರೆಗೆ ನೀರು ಪೂರೈಸಬಹುದು. ಬುಗಡನಹಳ್ಳಿ, ಕುಪ್ಪೂರ್​ ಜಾಕ್​ವೆಲ್​ನಲ್ಲಿ ತಲಾ 2 ಪಂಪುಮೋಟಾರ್​ ಕೆಟ್ಟಿದ್ದು ಒಂದೊಂದು ಮೋಟಾರ್​ ಓಡುತ್ತಿವೆ. ಇನ್ನೆರಡು ದಿನಗಳಲ್ಲಿ ರಿಪೇರಿ ಮಾಡಿ ನೀರಿನ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು. > ರೇಣುಕಾ ಆಯುಕ್ತೆ, ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net