

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಣೆಗಿರುವ ಶೌಚಗೃಹದ ಗುಂಡಿಗಳಲ್ಲಿ ಮಲವನ್ನು ಹೊರ ತೆಗೆಯುವ ಯಂತ್ರ (ಸಕ್ಕಿಂಗ್ ಯಂತ್ರ) ಒಂದೂವರೆ ವರ್ಷದಿಂದ ಹದಗೆಟ್ಟಿದ್ದು, ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ತುಕ್ಕು ಹಿಡಿಯುತ್ತ ಉಪಯೋಗಕ್ಕೆ ಬಾರದಂತಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿದ್ದು, ಸುಮಾರು 12 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಬಹುತೇಕ ಕುಟುಂಬಗಳು ಶೌಚಗೃಹವನ್ನು ಹೊಂದಿವೆ. ಈ ಹಿಂದೆ ಶೌಚಗೃಹದ ಗುಂಡಿಗಳಲ್ಲಿನ ಮಲವನ್ನು ಹೊರ ತೆಗೆಯಲು ಪೌರ ಕಾರ್ಮಿಕರನ್ನು ಬಳಕೆ ಮಾಡಲಾಗುತ್ತಿತ್ತು. ಇದು ಕಾನೂನಿಗೆ ವಿರೋಧವಾಗಿದ್ದು, ಈ ಬಗ್ಗೆ 5 ವರ್ಷಗಳ ಹಿಂದೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪಪಂ ಆಡಳಿತ ಸಕ್ಕಿಂಗ್ ಯಂತ್ರವನ್ನು ಖರೀದಿಸಿ ಪಪಂ ವ್ಯಾಪ್ತಿಯಲ್ಲಿನ ಶೌಚಗೃಹದ ಗುಂಡಿಗಳಲ್ಲಿನ ಮಲವನ್ನು ಹೊರ ತೆಗೆದು ಬೇರೆಡೆಗೆ ಸಾಗಿಸಲಾಗುತ್ತಿತ್ತು. ಅಲ್ಲದೆ ಬೇರೆ ಗ್ರಾಮಗಳಿಗೂ ಯಂತ್ರವನ್ನು ಕಳುಹಿಸಲಾಗುತ್ತಿದ್ದು, ಆದಾಯವು ಬರುತ್ತಿತ್ತು.
ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಸಕ್ಕಿಂಗ್ ಯಂತ್ರವು ಕಳೆದ ಒಂದೂವರೆ ವರ್ಷದಿಂದ ಹದಗೆಟ್ಟಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ಪಟ್ಟಣದ ಜನತೆ ಶೌಚಗೃಹದ ಗುಂಡಿಗಳಲ್ಲಿ ಮಲವನ್ನು ಹೊರತೆಗೆಸಬೇಕಾದರೆ ಖಾಸಗಿ ಯಂತ್ರದ ಮೊರೆ ಹೊಗಬೇಕಿದ್ದು, ಹೆಚ್ಚಿನ ಹಣವನ್ನು ತೆರಬೇಕಿದೆ. ಇದರಿಂದ ನಿವಾಸಿಗಳು ತುಂಬ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪಪಂ ಆಡಳಿತಕ್ಕೆ ತಿಳಿದಿದ್ದರೂ ಯಂತ್ರವನ್ನು ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ ಎಂಬುದಾಗಿ ಪಟ್ಟಣದ ಜನತೆ ಆರೋಪಿಸಿದ್ದಾರೆ.
ನಿರ್ಲಕ್ಷೃ: ಹದಗೆಟ್ಟ ಸಕ್ಕಿಂಗ್ ಯಂತ್ರವನ್ನು ದುರಸ್ತಿ ಮಾಡಿಸಲು ಪಪಂ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಪರಿಣಾಮ ಯಂತ್ರವನ್ನು ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ತುಕ್ಕು ಹಿಡಿಯುತ್ತಿದೆ. ಇದರಿಂದ ಜನರಿಗೆ ಯಂತ್ರದ ಸೇವೆ ದೊರಕುತ್ತಿಲ್ಲ. ಸರ್ಕಾರದ ಹಣ ವ್ಯಯಿಸಿ ಖರೀದಿಸಿದ ಯಂತ್ರ ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ಪಪಂ ಆಡಳಿತ ಇನ್ನಾದರೂ ಇತ್ತ ಗಮನಹರಿಸಿ ಮೂಲೆಗುಂಪಾಗಿರುವ ಸಕ್ಕಿಂಗ್ ಯಂತ್ರವನ್ನು ರಿಪೇರಿ ಮಾಡಿಸಿ ಸೇವೆಗೆ ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.