ತುಕ್ಕು ಹಿಡಿದ ವಾಹನಗಳ ವಿಲೇವರಿ

22Ravig5
ಬೆಳಗಾವಿ ಡಿಡಿಪಿಐ ಕಚೇರಿ ಆವರಣದಲ್ಲಿ ನಿಂತಿರುವ ವಾಹನಗಳು ತುಕ್ಕು ಹಿಡಿದಿರುವುದು.
Published on

ಬೆಳಗಾವಿ: ಇಲಾಖೆ ಆವರಣದಲ್ಲಿಯೇ ಐದು ವರ್ಷಗಳಿಗಿಂತಲೂ ಅಧಿಕ ಕಾಲ ಕೆಟ್ಟು ನಿಂತಿರುವ ವಾಹನಗಳು. ನಿರಂತರವಾಗಿ ಪತ್ರ ಬರೆದರೂ ವಿಲೇವಾರಿಗೆ ಅನುಮತಿ ನೀಡಿದ ಅಧಿಕಾರಿಗಳು. ಆ ಕಚೇರಿ ಆವರಣದ ಅಂದಗೆಡುತ್ತಿದೆ ಎಂಬ ಅಲ್ಲಿನ ಸಿಬ್ಬಂದಿಯ ಗೋಳು.

ಹೌದು. ಇದು ಬೆಳಗಾವಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಆವರಣದಲ್ಲಿರುವ ವಾಹನಗಳ ಹಾಗೂ ಅಲ್ಲಿನ ಸಿಬ್ಬಂದಿ ಪರಿಸ್ಥಿತಿ. ಎರಡು ಜೀಪ್ ಹಾಗೂ ಒಂದು ಕಾರು ಸೇರಿ ಒಟ್ಟು ಮೂರು ವಾಹನಗಳು ಕೆಟ್ಟು ನಿಂತು ಅಧರ್ ದಶಕವೇ ಕಳೆದಿದೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೊಸ ವಾಹನಗಳನ್ನು ಖರೀದಿಸಿ, ಇಲಾಖೆ ಕಾರ್ಯಚಟುವಟಿಕೆ ಮುಂದುವರಿಸಿದ್ದಾರೆ. ಆದರೆ, ನಿಂತಲ್ಲೇ ನಿಂತಿರುವ ವಾಹನಗಳು ತುಕ್ಕು ಹಿಡಿದಿವೆ. ದಿನೇ ದಿನೆ ಮತ್ತಷ್ಟು ಹಾಳಾಗುತ್ತಿವೆ.

ಗುಜರಿ ವಾಹನಗಳಂತೆ ಕಚೇರಿ ಆವರಣದಲ್ಲೇ ವರ್ಷಗಳಿಂದ ನಿಂತಿರುವ ವಾಹನಗಳು ಮಳೆಗಾಲ ದಲ್ಲಿ ನೀರು ನಿಂತು ಸೊಳ್ಳೆಗಳ ಉಗಮಸ್ಥಾನವಾಗುತ್ತಿವೆ. ಅಲ್ಲದೆ, ಕಚೇರಿ ಅಂದವನ್ನೂ ಕೆಡಿಸುತ್ತಿವೆ. ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವಾಹನಗಳನ್ನು ವಿಲೇವಾರಿ ಮಾಡಲು ಅನುಮತಿ ಕೋರಿ ಪತ್ರ ಬರೆದರೂ ಯಾವುದೇ ಸ್ಪಂದನೆ ದೊರಕು ತ್ತಿಲ್ಲ ಎಂದು ಕಚೇರಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾರದ ಉತ್ತರ: ಒಟ್ಟು ಮೂರು ವಾಹನಗಳಲ್ಲಿ ಬೆಳಗಾವಿ ಗ್ರಾಮೀಣ ಹಾಗೂ ಬೆಳಗಾವಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೀಪ್ (ಕೆಎ-22,ಜಿ-199, ಕೆಎ-22, ಜಿ-199), ಇನ್ನೊಂದು ಕಾರು ಆವರಣದಲ್ಲಿದ್ದು ಜಿಲ್ಲಾಧಿಕಾರಿ ಕಚೇರಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಆದರೆ, ಡಿಡಿಪಿಐ ಕಚೇರಿಯ ಯಾವುದೇ ಸಿಬ್ಬಂದಿಗೂ ಆ ವಾಹನ ಎಲ್ಲಿಯದು ಎಂಬುದೇ ಗೊತ್ತಿಲ್ಲ. ಇಲಾಖೆಯ ದಾಖಲೆಗಳಲ್ಲೂ ಆ ವಾಹನದ ಬಗ್ಗೆ ಉಲ್ಲೇಖವಿಲ್ಲ.

ಮೂರು ವಾಹನಗಳನ್ನು ಸಾರ್ವಜನಿಕ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ಅನುಮತಿ ನೀಡುವಂತೆ ಕೋರಿ 2021ರ ಜನವರಿ 13ರಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನಿರೀಕ್ಷಕರಿಗೆ ಪತ್ರ ಬರೆಯಲಾಗಿದೆ. ಪತ್ರ ಬರೆದು, ಒಂದೂವರೆ ವರ್ಷ ಕಳೆದರೂ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ.

ಸುಮಾರು ವರ್ಷಗಳಿಂದ ನಮ್ಮ ಕಚೇರಿ ಆವರಣದಲ್ಲಿ ಒಟ್ಟು ಮೂರು ವಾಹನಗಳಿದ್ದು, 2021ರಲ್ಲೇ ವಿಲೇವಾರಿಗೆ ಅನುಮತಿ ನೀಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ದೊರೆತ ಕೂಡಲೆ ವಿಲೇವಾರಿಗೆ ಕ್ರಮವಹಿಸಲಾಗುವುದು.| ಬಸವರಾಜ ನಾಲತವಾಡ, ಉಪನಿರ್ದೇಶಕ, ಶಿಕ್ಷಣ ಇಲಾಖೆ ಬೆಳಗಾವಿ

| ಶಿವಾನಂದ ಕಲ್ಲೂರ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net