

ಬಂಟ್ವಾಳ: ಬಿ.ಸಿ.ರೋಡು-ಸುರತ್ಕಲ್ ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿಯಾಗುತ್ತಿದ್ದ ಸಂದರ್ಭದಲ್ಲಿ ವಾಹನಗಳ ಶರವೇಗದ ಸಂಚಾರದಿಂದ ರಸ್ತೆ ದಾಟುವ ಪಾದಾಚಾರಿಗಳಿಗೆ ಅದರಲ್ಲೂ ವಿಶೇಷವಾಗಿ ತುಂಬೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ತುಂಬೆ ಬಿ.ಎ.ವಿದ್ಯಾಸಂಸ್ಥೆಯ ಬಳಿಯಲ್ಲಿ ನಿರ್ಮಿಸಿದ್ದ ಪಾದಾಚಾರಿ ಮೇಲ್ಸೇತುವೆ ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.
ಕಬ್ಬಿಣದ ಸರಳು, ಹಲಗೆ, ಬೀಮ್‌ಗಳು ತುಕ್ಕು ಹಿಡಿಯುತ್ತಿವೆ. ಮೇಲ್ಛಾವಣಿಗೆ ಹಾಸಿರುವ ಬಹುತೇಕ ತಗಡಿನ ಶೀಟುಗಳು ಹಾರಿ ಹೋಗಿವೆ. ಪಾದಾಚಾರಿಗಳ ಭದ್ರತೆಗಾಗಿ ಹಾಕಿರುವ ತಂತಿಗಳು ಕಳಚಿ ಬಿದ್ದಿವೆ.
ಚತುಷ್ಪಥ ಹೆದ್ದಾರಿ ನಿರ್ಮಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 12 ವರ್ಷದ ಹಿಂದೆ ಅಂದಾಜು 36 ಲಕ್ಷ ರೂ.ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಿದೆ. ಇದರಿಂದಾಗಿ ತುಂಬೆ ಬಿ.ಎ.ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಇದು ಉಪಯೋಗವಾಗಿತ್ತು. ಮಾತ್ರವಲ್ಲದೆ ವಿದ್ಯಾಸಂಸ್ಥೆಯೂ ಕೂಡ ಎಲ್ಲ ವಿದ್ಯಾರ್ಥಿಗಳು ಸುರಕ್ಷತೆ ದೃಷ್ಟಿಯಿಂದ ರಸ್ತೆ ದಾಟಲು ಇದೇ ಪಾದಾಚಾರಿ ಸೇತುವೆ ಬಳಸಬೇಕೆನ್ನುವ ನಿರ್ದೇಶನ ವಿದ್ಯಾರ್ಥಿಗಳಿಗೆ ನೀಡಿತ್ತು. ಮೇಲ್ಸೇತುವೆ ನಿರ್ಮಿಸಿದ ಬಳಿಕ ಅದರ ನಿರ್ವಹಣೆ ಜವಾಬ್ದಾರಿ ಎನ್‌ಎಚ್‌ಎಐ ಮರೆತು ಕುಳಿತ ಕಾರಣ ಮೇಲ್ಸೇತುವೆ ದುಸ್ಥಿತಿಗೆ ತಲುಪುವಂತಾಗಿದೆ. ಭಾರಿ ಗಾಳಿ ಮಳೆ ಸಂದರ್ಭದಲ್ಲಿ ಮೇಲ್ಛಾವಣಿಗೆ ಹಾಸಿದ್ದ ತಗಟಿನ ಶೀಟ್ ಒಂದೊಂದಾಗಿಯೇ ಹಾರಿ ಹೋಗಿದೆ. ಕಬ್ಬಿಣದ ಸರಳುಗಳು ಬಣ್ಣ, ಸುಣ್ಣ ಕಾಣದೆ ತುಕ್ಕು ಹಿಡಿದಿದೆ.
ಇದರಿಂದಾಗಿ ಈಗ ಸೇತುವೆ ಮೇಲೆ ನಡೆದಾಡುವುದೇ ಅಪಾಯಕಾರಿಯಾಗಿದೆ. ಈ ಸೇತುವೆ ದುರಸ್ತಿಪಡಿಸಿ ಜನ ಸಂಚಾರಕ್ಕೆ ಯೋಗ್ಯಗೊಳಿಸುವಂತೆ ಸ್ಥಳೀಯ ವಿದ್ಯಾಸಂಸ್ಥೆ ವತಿಯಿಂದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ.
ತುಂಬೆಯಲ್ಲಿರುವ ಪ್ರಯಾಣಿಕರ ಮೇಲ್ಸೇತುವೆ ತೀರಾ ಹದಗೆಟ್ಟಿದೆ. ಇದು ಉದ್ಘಾಟನೆಯಾದ ನಂತರ ಇದರ ನಿರ್ವಹಣೆ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಿಲ್ಲ. ಕಬ್ಬಿಣ ತುಂಡುಗಳು ತುಕ್ಕು ಹಿಡಿದು ರಸ್ತೆಗೆ ಬೀಳುತ್ತಿವೆ. ಪ್ರವೀಣ್ ಬಿ.ತುಂಬೆ, ಮಾಜಿ ಅಧ್ಯಕ್ಷ, ತುಂಬೆ ಗ್ರಾಪಂ ಮಕ್ಕಳ ಸುರಕ್ಷತೆಗಾಗಿ ಹೆದ್ದಾರಿ ಪ್ರಾಧಿಕಾರ ಓವರ್ ಬ್ರಿಡ್ಜ್ ನಿರ್ಮಿಸಿರುವುದು ನಿಜಕ್ಕೂ ಉತ್ತಮ ವಿಷಯ. ಆದರೆ ಅದರ ನಿರ್ವಹಣೆಯೂ ಅವರ ಜವಾಬ್ದಾರಿಯಾಗಿರುತ್ತದೆ. ಸ್ಥಳೀಯ ಪಂಚಾಯಿತಿಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಓವರ್ ಬ್ರಿಡ್ಜನ್ನು ದುರಸ್ತಿಗೊಳಿಸಲು ಮನವಿ ಮಾಡಿದ್ದೇವೆ. ವಿ.ಸುಬ್ರಹ್ಮಣ್ಯ ಭಟ್, ಪ್ರಾಂಶುಪಾಲರು, ತುಂಬೆ ಪಪೂ ಕಾಲೇಜು https://www.vijayavani.net/special-meeting-of-mittamajalu-dev https://www.vijayavani.net/diya-m-kotyan-passed-in-top-rank