‘ತುಕಡೆ ತುಕಡೆ ಗ್ಯಾಂಗ್’ನಿಂದ ದಲಿತರ ದುರ್ಬಳಕೆ : ಸಿ.ಟಿ.ರವಿ

C.T
Published on

ಮೈಸೂರು: ದೇಶವನ್ನು ವಿಭಜಿಸುವ ಮಾನಸಿಕ ಹೊಂದಿರುವ ‘ತುಕಡೆ ತುಕಡೆ ಗ್ಯಾಂಗ್’ ದಲಿತರನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ದಲಿತ ಸಮುದಾಯ ಜಾಗೃತರಾಗುವ ತುರ್ತು ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದಲಿತ ಸಮುದಾಯಕ್ಕೆ ಕರೆ ನೀಡಿದರು.

ನಗರದ ಲಲಿತ ಮಹಲ್ ಪ್ಯಾಲೆಸ್‌ನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿ, ಅಫ್ಘಾನಿಸ್ತಾನದ ಬಾಮಿಯಾನ್ ಬುದ್ಧನ ಪ್ರತಿಮೆಯನ್ನು ಯಾರು ಒಡೆದು ಹಾಕಿದರು? ಏತಕ್ಕೆ ಒಡೆದು ಹಾಕಿದರು? ಒಡೆದು ಹಾಕುವುದರ ಹಿಂದಿನ ಮಾನಸಿಕತೆ ಏನಿತ್ತು? ಅಂತಹ ಮಾನಸಿಕ ಹೊಂದಿರುವ ‘ತುಕಡೆ ತುಕಡೆ ಗ್ಯಾಂಗ್’ ಭಾರತವನ್ನು ಸಹ ವಿಭಜಿಸುವ ಆಲೋಚನೆಯಲ್ಲಿ ಇದೆ. ಆ ‘ತುಕಡೆ ತುಕಡೆ ಗ್ಯಾಂಗ್’ನವರು ದಲಿತ ಸಮುದಾಯದವರೊಂದಿಗೆ ಸೇರಿಕೊಂಡು ತಮ್ಮ ಲಾಭಕೋಸ್ಕರ ‘ಜೈ ಭೀಮ್’ ಅನ್ನುತ್ತಿದ್ದಾರೆ. ಯಾರು ಶತ್ರುಗಳು ಯಾರು ಮಿತ್ರರು ಎಂಬುದನ್ನು ದಲಿತ ಸಮುದಾಯ ಅರಿಯಬೇಕು. ಶತ್ರು ಎಂದಿಗೂ ಮಿತ್ರನಾಗಲು ಸಾಧ್ಯವಿಲ್ಲ ಎಂದು ಸಿ.ಟಿ. ರವಿ ಪರೋಕ್ಷ ವಾಗಿ ಕಾಂಗ್ರೆಸ್ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಭಜಿಸುವ ಮಾನಸಿಕ ಹೊಂದಿರುವವರಿಂದ ದೇಶವೇನಾದರು ನಾಶವಾಗಿ ಹೋದರೆ ಸಂವಿಧಾನ ಉಳಿಸಲು ಸಾಧ್ಯವೇ? ಸಂವಿಧಾನ ಇಲ್ಲದೆ ಹೋದರೆ ಅಂಬೇಡ್ಕರ್ ವಿಚಾರಧಾರೆ ಉಳಿಯಲು ಸಾಧ್ಯವೇ? ಅಂಬೇಡ್ಕರ್ ವಿಚಾರಧಾರೆ ಇಲ್ಲದೆ ಹೋದರೆ ದಲಿತರಿಗೆ ನ್ಯಾಯ ದೊರೆಯಲು ಸಾಧ್ಯವೇ? ಈ ಬಗ್ಗೆ ವಿಚಾರ ಮಾಡುವ ಅನಿವಾರ್ಯ ಕಾಲಘಟ್ಟದಲ್ಲಿ ದಲಿತ ಸಮುದಾಯ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net