

ಯಳಂದೂರು: ತಾಲೂಕಿನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ 20ಕ್ಕೂ ಹೆಚ್ಚು ಕೆರೆ, ಕಟ್ಟೆಗಳು ಭರ್ತಿಯಾಗಿ ಕೋಡಿ ಬೀಳಲಾರಂಭಿಸಿವೆ.
ಕಳೆದ ಎರಡು ತಿಂಗಳ ಹಿಂದೆ ಮಳೆ ಆಗಿದ್ದರೂ ಹಳ್ಳಕೊಳ್ಳಗಳಲ್ಲಿ ರಭಸದಿಂದ ನೀರು ಹರಿದಿರಲಿಲ್ಲ. ಆದರೆ, ಐದಾರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಕೆರೆ ಕಟ್ಟೆಗಳು ಮೈದುಂಬಿಕೊಂಡಿವೆ.
ಮಳೆ ಇಲ್ಲದ ಕಾರಣ ಅನೇಕ ವರ್ಷಗಳಿಂದ ಕೆರೆಗಳು ತುಂಬಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಒಂದಷ್ಟು ಮಳೆಯಾಗಿದ್ದು, ಕಳೆದ ವರ್ಷ ಕೆಲವು ಕೆರೆಗಳು ಕೋಡಿ ಬಿದ್ದಿದ್ದವು. ಈ ವರ್ಷ ಧಾರಾಕಾರವಾಗಿ ಮಳೆಯಾಗುತ್ತಿರುವ ಕಾರಣ ತಾಲೂಕಿನ ದುಗ್ಗಹಟ್ಟಿ, ಕಂದಹಳ್ಳಿ, ಅಂಬಳೆ, ವೈ.ಕೆ.ಮೋಳೆ, ಗುಂಬಳ್ಳಿ, ಯರಗಂಬಳ್ಳಿ, ಗೌಡಹಳ್ಳಿ, ಅಗರ, ಕೆಸ್ತೂರು, ಹೊನ್ನೂರು, ಯರಿಯೂರು, ಮೆಲ್ಲಹಳ್ಳಿ, ಚಂಗಚಹಳ್ಳಿ, ಉಪ್ಪಿನಮೋಳೆ, ಗಣಿಗನೂರು, ಚಾಮಲಾಪುರ, ಬೂದಿತಿಟ್ಟು ಸೇರಿದಂತೆ 20 ಕ್ಕೂ ಹೆಚ್ಚು ಕೆರೆ, ಕಟ್ಟೆಗಳು ಹಾಗೂ ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಹೊಸಹಳ್ಳಿ ಕೆರೆ, ಗೌಡಹಳ್ಳಿ ಆಮೆಕೆರೆ ಈ ಬಾರಿ ಸಂಪೂರ್ಣವಾಗಿ ಭರ್ತಿಯಾಗಿವೆ.
ದುರಸ್ತಿ ಇಲ್ಲ: ತಾಲೂಕಿನ ಯರಗಂಬಳ್ಳಿ ಗ್ರಾಮದ ಉಳುಗೆರೆ, ಎಲೇಕೆರೆ ಹಾಗೂ ಗುಂಬಳ್ಳಿ ಗ್ರಾಮದ ಕೆರೆ ಏರಿ ಒಡೆದು ಹೋಗಿ ಹಲವು ದಿನಗಳು ಕಳೆದಿದ್ದರೂ ನೀರಾವರಿ ಇಲಾಖೆ, ಜಿಲ್ಲಾಡಳಿತ ಕೆರೆ ಏರಿ ದುರಸ್ತಿಪಡಿಸಿಲ್ಲ. ಇದರಿಂದ ಕೆರೆ ಏರಿ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದಿರುವ ಬೆಳೆ ನಾಶವಾಗಿದೆ. ಇನ್ನಾದರೂ ಕೆರೆ ಏರಿ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಕೆರೆಗಳು ಅಪಾರ ಪ್ರಮಾಣದ ಮಣ್ಣು, ಕಡ್ಡಿಗಳಿಂದ ಕೂಡಿರುವುದರಿಂದ ಕೆರೆಗಳಲ್ಲಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ. ಜತೆಗೆ ಏರಿ ದುರಸ್ತಿ ಮಾಡದಿರುವುದರಿಂದ ಬಿರುಕು ಉಂಟಾಗುತ್ತಿದೆ. ಕೂಡಲೇ ಕೆರೆ, ಕಾಲುವೆಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.
ಲಕ್ಷ್ಮೀಕಾಂತ್ ಯರಗಂಬಳ್ಳಿ ನಿವಾಸಿ
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಾಗೂ ಸುವರ್ಣಾವತಿ ಪ್ರವಾಹದಿಂದ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ಯರಗಂಬಳ್ಳಿ ಹಾಗೂ ಗುಂಬಳ್ಳಿ ಕೆರೆ ಏರಿ ಒಡೆದು ಹೋಗಿದ್ದು, ದುರಸ್ತಿಪಡಿಸುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ.
ಆನಂದಪ್ಪ ನಾಯಕ್ ತಹಸೀಲ್ದಾರ್