ತುಂಬಿ ಹರಿದ ಸುವರ್ಣವತಿ ನದಿ

30 kgl photo 1
ಕೊಳ್ಳೇಗಾಲ ತಾಲೂಕಿನ ಮುಳ್ಳೂರು ರಸ್ತೆಯಲ್ಲಿ ಸುವರ್ಣಾವತಿ ನದಿ ಸೇತುವೆ ಮುಳುಗಡೆಯಾಗಿದೆ.
Published on

ಕೊಳ್ಳೇಗಾಲ: ತಾಲೂಕಿನಿಂದ ಮುಳ್ಳೂರು- ಕಲಿಯೂರು ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ಸುವರ್ಣವತಿ ನದಿ (ಹೊನ್ನಹೊಳೆ) ತುಂಬಿ ಸೇತುವೆಯ ಮೇಲೆ ಒಂದೂವರೆ ಅಡಿ ಹರಿಯುತ್ತಿದೆ. ಪಟ್ಟಣದೊಳಗೆ ನದಿ ತುಂಬಿ ಹರಿದ ಪರಿಣಾಮ ಬೂದಿತಿಟ್ಟು- ಬೆಂಡರಹಳ್ಳಿ ಹೊರವಲಯ, ಮುಡಿಗುಂಡ ಸಮೀಪದ ಗಣಪತಿ ದೇವಸ್ಥಾನ ಜಲಾವೃತವಾಗಿವೆ.


ಮುಡಿಗುಂಡದಿಂದ ಕುಣಗಳ್ಳಿ ಗ್ರಾಮದ ಕಡೆ ತೆರಳುವ ಬೆಂಡರಹಳ್ಳಿ ರಸ್ತೆ ನೀರಿನಿಂದ ಮುಳುಗಡೆಗೊಂಡಿದೆ. ಮುಳ್ಳೂರು- ಕಲಿಯೂರು ಮಾರ್ಗದ ಹೊನ್ನಹೊಳೆ ಸೇತುವೆ ಮುಳುಗಿದ್ದು, ಇವರೆಡೂ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಪಟ್ಟಣದಿಂದ ಮುಳ್ಳೂರು ಮಾರ್ಗವಾಗಿ ತಿ.ನರಸೀಪುರ ಸಮೀಪದ ಗಾರ್ಮೆಂಟ್‌ಗೆ ತೆರಳುವ ಮಹಿಳೆಯರು ಹಾಗೂ ಮೈಸೂರು ಕಡೆಗೆ ತೆರಳುವ ಜನರಿಗೆ ಸಾಕಷ್ಟು ತೊಂದರೆಯಾಯಿತು. ರಾತ್ರೋ ರಾತ್ರಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನಗಳು ಸಂಚರಿಸಲು ಪರದಾಡಿದವು. ಎಚ್ಚೆತ್ತ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಿದರು.


ಬೆಂಡರಹಳ್ಳಿ ರಸ್ತೆ ಹಾಗೂ ಮುಳ್ಳೂರು ಸಮೀಪದ ಸೇತುವೆ ಜಲಾವೃತವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಸಂಚಾರ ನಿರ್ಬಂಧಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೊನ್ನಹೊಳೆ ಸಮೀಪದ ಹಲವು ಜಮೀನುಗಳಿಗೆ ನೀರು ನುಗ್ಗಿದೆ. ಎರಡು ದಿನದಿಂದ ಬಿದ್ದ ಧಾರಾಕಾರ ಮಳೆಗೆ ಪಟ್ಟಣದ ಸಂತೇಬೀದಿಯ ರಘುನಂದನ್ ಎಂಬುವರ ಮನೆಗೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net