ತುಂಡರಿಸಿ ಬಿದಿದ್ದ ಹೆಬ್ಬೆರಳು ಯಶಸ್ವಿ ಜೋಡಣೆ

Published on

ಮೈಸೂರು: ಸಂಪೂರ್ಣವಾಗಿ ತುಂಡರಿಸಿ ಬಿದ್ದಿದ್ದ ಹೆಬ್ಬೆರಳನ್ನು ಮರು ಜೋಡಣೆ ಮಾಡುವಲ್ಲಿ ನಗರದ ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ವೃತ್ತಿಯಲ್ಲಿ ಬಡಗಿ (ಮರಗೆಲಸ) ಕೆಲಸ ಮಾಡುವ ಸುಮಾರು 65 ವರ್ಷದ ವ್ಯಕ್ತಿಯೊಬ್ಬರ ಎಡಗೈನ ಹೆಬ್ಬೆರಳು ಇತ್ತೀಚೆಗೆ ಕೆಲಸ ಮಾಡುವಾಗ ಆಕಸ್ಮಿಕವಾಗಿ ಹರಿತ ಆಯುಧದಿಂದ ತುಂಡರಿಸಿ ಬಿದ್ದಿತ್ತು. ಸಂಬಂಧಿಕರು ತುಂಡಾಗಿ ಬಿದ್ದಿದ್ದ ಹೆಬ್ಬೆರಳ ಸಹಿತ ಆಸ್ಪತ್ರೆಗೆ ಅವರನ್ನು ಕರೆ ತಂದಿದ್ದರು. ಆದರೆ, ರೋಗಿಯು ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದರಿಂದ ಹೆಬ್ಬೆರಳನ್ನು ಜೋಡಣೆ ಮಾಡುವ ಚಿಕಿತ್ಸೆ ನಡೆಸುವುದು ವೈದ್ಯರಿಗೆ ಸವಾಲಾಗಿತ್ತು. ಆಸ್ಪತ್ರೆಯ ತಜ್ಞ ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಕತ್ತರಿಸಿದ್ದ ರಕ್ತನಾಳಗಳು ಮತ್ತು ನರಗಳನ್ನು ಮೈಕ್ರೊವಾಸ್ಕುಲರ್ ಅನಾಸ್ಟೊಮೊಸಿಸ್ ತಂತ್ರಜ್ಞಾನದ ಮೂಲಕ ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದರೆ.
ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರ ಪ್ರಯತ್ನದಿಂದಾಗಿ ಹೆಬ್ಬೆರಳು ಕಳೆದುಕೊಂಡಿದ್ದ ವ್ಯಕ್ತಿ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯ ಕನ್ಸಲ್ಟೆಂಟ್ ಪ್ಲಾಸ್ಟಿಕ್ ಆ್ಯಂಡ್ ರಿಕನ್ಸ್ಟ್ರಕ್ಟಿವ್ ಸರ್ಜನ್ ಡಾ.ಎನ್.ವಿಜಯ್ಕುಮಾರ್, ಕನ್ಸಲ್ಟೆಂಟ್ ಅನಸ್ಥೇಸಿಯೋಲಾಜಿಸ್ಟ್ ಡಾ.ಎಂ.ಪಿ.ಹರೀಶ್‌ಕುಮಾರ್, ಕನ್ಸಲ್ಟೆಂಟ್ ಸರ್ಜನ್ ಡಾ.ಅರವಿಂದ್ ಶಸ್ತ್ರ ಚಿಕಿತ್ಸೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net