ತುಂಗಾ ಸಸ್ಯ ಕ್ಷೇತ್ರದಲ್ಲಿ 61500 ಗಿಡಗಳು ಲಭ್ಯ

sri tree
Published on

ಶೃಂಗೇರಿ: ಅರಣ್ಯ ಬೆಳೆಸಲು ರೈತರಿಗೆ ಹಾಗೂ ಸಾರ್ವಜನಿಕರಿಗೆ ಪ್ರೋತ್ಸಾಹ ನೀಡಲು ಸಾಮಾಜಿಕ ಅರಣ್ಯ ಇಲಾಖೆ ಕಲ್ಕಟ್ಟೆ ತುಂಗಾ ಸಸ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸಸಿಗಳನ್ನು ಬೆಳೆಸಿ ವಿತರಣೆ ಮಾಡುತ್ತಿದೆ.

ಸ್ಥಳೀಯವಾಗಿ ಉತ್ತಮವಾಗಿ ಬೆಳೆಯುವ ಮರದ ಜಾತಿಯ ವಿವಿಧ ಗಿಡವನ್ನು ಬೆಳೆಸಿದ್ದು, ವಿತರಣೆ ಆರಂಭವಾಗಿದೆ. ಸಿಲ್ವರ್, ಮಹಾಗನಿ, ಹಲಸು, ಕಿತ್ತಳೆ, ಗೇರು, ಕಾಡು ಬಾದಾಮಿ, ಹೊಳೆಮತ್ತಿ, ಹೊನ್ನೆ, ಹೆಬ್ಬಲಸು, ಬಸವನಪಾದ ಸಹಿತ ವಿವಿಧ ಜಾತಿಯ ಸಸಿಗಳಿವೆ.

ಕಲ್ಕಟ್ಟೆ ನರ್ಸರಿಯಲ್ಲಿ 61500 ಗಿಡ ಈ ವರ್ಷ ಲಭ್ಯವಿದ್ದು, ಇಲಾಖೆಯಿಂದ ನೆಡುತೋಪು ನಿರ್ಮಾಣಕ್ಕೆ, ನರೇಗಾ ಯೋಜನೆಯ ನೆಡುತೋಪು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗಿಡ ನೀಡಲಾಗುತ್ತಿದೆ. ಎರಡು ಅಳತೆಯಲ್ಲಿ ಸಸಿಗಳು ಲಭ್ಯವಿದ್ದು ಚಿಕ್ಕ ಪ್ಲಾಸ್ಟಿಕ್ ಬುಟ್ಟಿಯ ಗಿಡಕ್ಕೆ 3 ರೂ. ಮತ್ತು ದೊಡ್ಡ ಪ್ಲಾಸ್ಟಿಕ್ ಬುಟ್ಟಿ ಗಿಡಕ್ಕೆ 6 ರೂ. ನಿಗದಿಗೊಳಿಸಲಾಗಿದೆ. ಸಸಿ ಪಡೆಯಲು ರೈತರು ಪಹಣಿ, ಲಾನುಭವಿಯ ಎರಡು ಭಾವಚಿತ್ರ, ಪರಿಶಿಷ್ಟ ಜಾತಿ, ಪಂಗಡವರಾದಲ್ಲಿ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಖಾತೆ ಪುಸ್ತಕದ ನಕಲು ನೀಡಬೇಕು.

ಈಗ ಹದವಾದ ಮಳೆಯಾಗುತ್ತಿದ್ದು, ಗಿಡ ನೆಡಲು ಸೂಕ್ತ ಸಮಯವಾಗಿದ್ದು, ರೈತರು ಜಮೀನಿನಲ್ಲಿ ಹಾಗೂ ಖಾಲಿ ಇರುವ ಜಾಗದಲ್ಲಿ ಅಗತ್ಯವಿರುವ ಗಿಡವನ್ನು ಬೆಳಸಬಹುದಾಗಿದೆ. ಕಾಳುಮೆಣಸು ಬೆಳೆಸಲು ಸೂಕ್ತವಾಗಿರುವ ಸಿಲ್ವರ್, ಮಹಾಗನಿ ಗಿಡಗಳನ್ನು ನೀಡಲಾಗುತ್ತಿದ್ದು, ರೈತರು ಇಲಾಖೆಯ ಯೋಜನೆಯ ಲಾಭ ಪಡೆಯಬೇಕು ಎಂದು ವಲಯಾರಣ್ಯಧಿಕಾರಿ ಸಂಜೀವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net