ತುಂಗಭದ್ರಾ ನದಿ ಪ್ರವಾಹಕ್ಕೆ ನಲುಗಿದ ಕಂಪ್ಲಿ

19 KAMPLI 03
Published on

ಕಂಪ್ಲಿ: ತುಂಗಭದ್ರಾ ನದಿ ಪ್ರವಾಹ ಜನರನ್ನು ತೀವ್ರ ಸಂಕಷ್ಟಕ್ಕೆ ಗುರಿ ಮಾಡಿದೆ. ಕೋಟೆ ಆಂಜನೇಯ ಗುಡಿ ಬಳಿ ಸ್ಮಶಾನಕ್ಕೆ ತೆರಳುವ ಹಾದಿಯಲ್ಲಿ ಸೋಮವಾರ ನದಿ ನೀರು ನುಗ್ಗಿದ್ದರಿಂದ ಅಂತ್ಯಕ್ರಿಯೆಗಾಗಿ ಹೆಣವನ್ನು ತೆಪ್ಪದಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲಾಗಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ 1.15 ಲಕ್ಷ ಕ್ಯೂಸೆಕ್ ನೀರು ಹರಿಸಿರುವುದರಿಂದ ಪಟ್ಟಣದಿಂದ ಗಂಗಾವತಿಗೆ ಸಂಪರ್ಕಿಸುವ ಸೇತುವೆ ಮುಳುಗಿದ್ದು, ಎರಡನೇ ದಿನವೂ ವಾಹನಗಳ ಸಂಚಾರ ಸ್ಥಗಿತವಾಗಿದೆ. ಸೇತುವೆ ಮುಳುಗಿರುವುದರಿಂದ ಜಲಸಸ್ಯಗಳು ರಕ್ಷಣಾ ಕಂಬಿಗಳಿಗೆ ಸಿಲುಕಿಕೊಂಡಿವೆ. ಕಬ್ಬು, ಬಾಳೆ, ಭತ್ತದ ಗದ್ದೆಗೆ ನೀರು ನುಗ್ಗಿದೆ. ಬನವಾಸಿ ರಸ್ತೆ, ಸ್ಮಶಾನ ರಸ್ತೆ ಮೇಲೆ ನೀರು ಹರಿಯುತ್ತಿದೆ. ಪಂಪಾಪತಿ ದೇವಸ್ಥಾನ ಬಳಿಯ ಉತ್ತರ ಕ್ರಿಯಾಮಂಟಪ, ಹೊಳೆ ಆಂಜನೇಯಸ್ವಾಮಿ, ಮಾಧವ ತೀರ್ಥರ ಬೃಂದಾವನ ಜಲಾವೃತಗೊಂಡಿವೆ.

ತುಂಗಭದ್ರಾ ನದಿ ಹಿನ್ನೀರು ನುಗ್ಗಿ ಸಣಾಪುರ-ಇಟಗಿ ಮಧ್ಯದ ಇಟಗಿ ಹಳ್ಳದ ಸೇತುವೆ ಮಂಗಳವಾರ ಮುಳುಗಿದ್ದು, ಇಟಗಿ, ಮಣ್ಣೂರು, ಸೂಗೂರು ಸೇರಿದಂತೆ ಸಿರಗುಪ್ಪ ಕಡೆಯ ಸಂಪರ್ಕ ಸ್ಥಗಿತಗೊಂಡಿದೆ. ಸಾರ್ವಜನಿಕರು ಎಮ್ಮಿಗನೂರು ಮೂಲಕ ಸಿರಗುಪ್ಪ ಕಡೆ ಸಂಚರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net