

ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ಗುರುವಾರ ನೀರು ಬಿಡುಗಡೆ ಮಾಡಲಾಯಿತು.
ಸದ್ಯ ಜಲಾಶಯದಲ್ಲಿ 83 ಟಿಎಂಸಿ ಅಡಿ ನೀರು ಸಂಗ್ರಹವಿದೆ. 21ಸಾವಿರ ಕ್ಯೂಸೆಕ್ ಒಳ ಹರಿವಿದೆ. ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಈಗಾಗಲೇ ಭತ್ತ ನಾಟಿ ವಿಳಂಬವಾಗಿದೆ. ವಾರದಿಂದ ನೀರು ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದರು. ಸರ್ಕಾರ ಐಸಿಸಿ ಸಭೆ ನಡೆಸದೆ ನೇರವಾಗಿ ಆದೇಶಿಸುವ ಮೂಲಕ ನೀರು ಬಿಡುಗಡೆ ಮಾಡಿದೆ.
ಪ್ರಭಾರ ಮುಖ್ಯ ಅಭಿಯಂತರ ಬಸವರಾಜ ಎಲ್. ಬಟನ್ ಒತ್ತುವ ಮೂಲಕ ಕಾಲುವೆಗೆ ನೀರು ಬಿಡುಗಡೆ ಮಾಡಿದರು. ಎಇಇ ಬಸಪ್ಪ ಜಾನಕಾರ ಹಾಗೂ ವಿವಿಧ ರೈತರು ಇದ್ದರು. ಸದ್ಯ 200 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹಂತ ಹಂತವಾಗಿ 3000 ಕ್ಯೂಸೆಕ್ ವರೆಗೆ ಹೆಚ್ಚಿಸುವುದಾಗಿ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ. ಒಂದೆರೆಡು ದಿನದಲ್ಲಿ ಕೊನೇ ಭಾಗದ ರೈತರಿಗೆ ನೀರು ತಲುಪಲಿದೆ.