

ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಶೀಘ್ರದಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಗೌರವಿಸಿ ಮಾತನಾಡಿದ ಅವರು, ಉತ್ತಮ ವ್ಯವಸ್ಥೆಯೊಂದಿಗೆ ನಿರ್ಮಾಣಗೊಂಡಿರುವ ಪಪಂ ನೂತನ ಕಟ್ಟಡದಲ್ಲಿ ಪಟ್ಟಣದ ಜನತೆಗೆ ಹೊಸ ಪ್ರೇರಣೆಯೊಂದಿಗೆ ಮಾದರಿ ಸೇವೆ ದೊರೆಯುವಂತಾಗಲಿ ಎಂದರು.
ಸ್ವಚ್ಛತೆಗೆ ಮಾತ್ರವಲ್ಲದೆ ಸಂಸ್ಕೃತಿಗೂ ಹೆಸರಾಗಿರುವ ಈ ಪಟ್ಟಣ ರಾಜ್ಯಮಟ್ಟದಲ್ಲಿ ತನ್ನ ಹಿರಿಮೆಯನ್ನು ಮೆರೆದಿದೆ. 90ರ ದಶಕದವರೆಗೂ ಪುರಸಭೆಯಾಗಿದ್ದ ಈ ಪಟ್ಟಣವನ್ನು ನೆರೆಯ ಹಳ್ಳಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಶೀಘ್ರದಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಯತ್ನ ನಡೆದಿದೆ ಎಂದರು.
ಸರ್ಕಾರಿ ಕಟ್ಟಡವಾಗಿದ್ದರೂ ಹೊಸ ಕಟ್ಟಡ ಪ್ರವೇಶದ ಈ ಸಂಭ್ರಮದ ಸಂದರ್ಭದಲ್ಲಿ ಈ ಮೊದಲು ಸೇವೆ ಸಲ್ಲಿಸಿದವರನ್ನು ಗೌರವಿಸುವ ಈ ಕೌನ್ಸಿಲ್‌ನ ಕಾರ್ಯ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಪಪಂ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಶ್ರೀಸಾಮಾನ್ಯರಿಗೂ ಇಲ್ಲಿ ಉತ್ತಮ ಸೇವೆ ದೊರೆಯುವಂತಾಗಬೇಕು ಎಂದು ಹೇಳಿದರು.
ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿ ಮಾತನಾಡಿ, ಈ ಪಟ್ಟಣದ ಇತಿಹಾಸದಲ್ಲಿ ಇದೊಂದು ಮಹತ್ವದ ಅಪೂರ್ವ ಕ್ಷಣವಾಗಿದ್ದು ಈ ಕಾರ್ಯಕ್ಕೆ ನೆರವಾದ ಸರ್ವರೂ ಅಭಿನಂದನೀಯರಾಗಿದ್ದಾರೆ. ರಾಜಕೀಯವಾಗಿ ನಮ್ಮಲ್ಲಿ ಭಿನ್ನತೆ ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಒಂದು ಕುಟುಂಬದಂತೆ ಕೆಲಸ ಮಾಡಲು ನೆರವಾಗುತ್ತಿರುವ ಎಲ್ಲರ ಸಹಕಾರಕ್ಕೆ ಋಣಿಯಾಗಿದ್ದೇನೆ. ಎಲ್ಲರ ಆಶಯದಂತೆ ಈ ಸ್ಥಳೀಯಾಡಳಿತದ ಸತ್ಸಂಪ್ರದಾಯವನ್ನು ಮುಂದುವರಿಸೋಣ ಎಂದೂ ಹೇಳಿದರು.