ತಿರುಪತಿ ಮಾದರಿಯಲ್ಲಿ ವೆಂಕಟೇಶ್ವರ ದೇವಸ್ಥಾನ

4manju2
Published on

ಬೆಳಗಾವಿ: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಮಾದರಿಯಲ್ಲಿಯೇ ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಗುಡ್ಡದಲ್ಲಿ ಜೂ.6ರಂದು ಬೆಳಗ್ಗೆ 10 ಗಂಟೆಗೆ ವೆಂಕಟೇಶ್ವರ ದೇವಸ್ಥಾನ, ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮತ್ತು ಅಡಿಗಲ್ಲು ಸಮಾರಂಭ ಜರುಗಲಿದೆ ಎಂದು ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರು ತಿಳಿಸಿದರು.

ನಗರದ ರಡ್ಡಿ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲೂಕಿನ ಎರೆಹೊಸಳ್ಳಿ ಗ್ರಾಮದ ರಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕಾನೂನು ಸಚಿವ ಎಚ್.ಕೆ. ಪಾಟೀಲ ವೆಂಕಟೇಶ್ವರ ದೇವಸ್ಥಾನಕ್ಕೆ , ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಾಲಾಜಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಿದ್ದಾರೆ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಂಘದ ಉಪಾಧ್ಯಕ್ಷ ಕಾಂತು ಜಾಲಿಬೇರಿ ಮಾತನಾಡಿ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಸಲ್ಲಿಸುವ ಸಂಕಲ್ಪದಿಂದ ನಮ್ಮ ಸಂಘ ಸದಾ ಪಕ್ಷಾತೀತ, ಜಾತ್ಯತೀತವಾಗಿ ಮುನ್ನಡೆಸುತ್ತಿದ್ದೇವೆ. ಎಲ್ಲ ಜನರು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು ಸ್ವಯಂಪ್ರೇರಿತವಾಗಿ ದೇವಸ್ಥಾನಕ್ಕೆ ಆರ್ಥಿಕ ಧನಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದರು.

ಸಂಘದ ನಿರ್ದೇಶಕ ಬಸನಗೌಡ ಕಾಮನಗೌಡರ ಮಾತನಾಡಿ, ತಿರುಪತಿ ದೇವಸ್ಥಾನ ಮಾದರಿ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಲು ತಿರುಪತಿ ಟ್ರಸ್ಟ್‌ನವರು ವೆಂಕಟೇಶ್ವರ ಮೂರ್ತಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ದೇವಸ್ಥಾನಕ್ಕೆ ಪೂಜಾರಿಗಳನ್ನು ಅವರೇ ನಿಯೋಜನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂಘದ ನಿರ್ದೇಶಕಿ ಲತಾ ಅರಕೇರಿ, ಶಾಂತಾ ಆರ್.ಜಂಗಲ, ಪ್ರಕಾಶ ಕಕರಡ್ಡಿ, ಮಂಜುನಾಥ ಪಾಟೀಲ, ಪರಮೇಶ್ವರ ಮುಳ್ಳೂರು, ರಾಮಣ್ಣ ಅರಕೇರಿ, ಬಿ.ಎ.ಹಸರಡ್ಡಿ, ನಾರಾಯಣ ಕೆಂಚರಡ್ಡಿ, ರವೀಂದ್ರ ಹಿರೇದೇಸಾಯಿ, ಶ್ರೀನಿವಾಸ ಬಿಸನಕೊಪ್ಪ, ಗಿರೀಶ ಮಳಲಿ, ವೆಂಕಟೇಶ ಸೋನವಾಲ್ಕರ್, ಕೆಪಿಸಿಸಿ ಸದಸ್ಯ ರಾಜೇಂದ್ರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net