

ಚಾಮರಾಜನಗರ: ಮನುಷ್ಯರು ವಾಂತಿ ಮಾಡುವುದನ್ನು ನೋಡಿದರೆ ವಾಕರಿಗೆ ಬರುತ್ತದೆ. ಅದೇ ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್) ಸಿಕ್ಕಿದರೆ ಕೋಟ್ಯಂತರ ರೂಪಾಯಿ ಗಳಿಸುವ ಆಸೆ ಬರುತ್ತದೆ. ಕೊಳ್ಳೇಗಾಲ ಮಾರ್ಗದಲ್ಲಿ ತಿಮಿಂಗಿಲ ವಾಂತಿ ಸಾಗಣೆ ಮಾಡುವ ದಂಧೆಕೋರರ ಹೆಡೆಮುರಿ ಕಟ್ಟಲಾಗುತ್ತಿದೆ.
ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆ ರಸ್ತೆ ಹಲವು ಅಕ್ರಮಗಳ ಸಂಚಾರ ಮಾರ್ಗವಾಗಿದೆ. ಅದರಲ್ಲೂ ಕೊಳ್ಳೇಗಾಲದ ಹಾದಿ ಮಾರುವವರು ಮತ್ತು ಕೊಳ್ಳುವವರ ಸಂಪರ್ಕಕ್ಕೆ ಬಳಕೆಯಾಗುತ್ತಿದೆ. ಭಾರಿ ಬೇಡಿಕೆ ಇರುವ, ಚಿನ್ನಕ್ಕಿಂತಲೂ ಬೆಲೆ ಇರುವ ತಿಮಿಂಗಿಲ ವಾಂತಿಯನ್ನೂ ಸಾಗಣೆ ಮಾಡಲಾಗುತ್ತಿದೆ. ಕೇರಳ, ತಮಿಳುನಾಡು, ಮಂಗಳೂರು, ಶಿವಮೊಗ್ಗ ಮೂಲದವರು ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ತಿಮಿಂಗಿಲ ವಾಂತಿ ಸಾಗಣೆ ಮಾಡುತ್ತಿದ್ದು, ದಂಧೆಕೋರರ ಹೆಡೆಮುರಿ ಕಟ್ಟುವ ಕೆಲಸವೂ ಆಗುತ್ತಿದೆ. ಈ ವಿಚಾರದಲ್ಲಿ ಕೊಳ್ಳೇಗಾಲದ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ದಕ್ಷತೆ ಎದ್ದು ಕಾಣುತ್ತಿದೆ.
ಪತ್ತೆಯಾದ ಪ್ರಕರಣಗಳೆಷ್ಟು?
2023 ಮತ್ತು 2024ರಲ್ಲಿ ಕೊಳ್ಳೇಗಾಲ ಮಾರ್ಗದಲ್ಲಿ ತಿಮಿಂಗಿಲ ವಾಂತಿ ಸಾಗಣೆ ಮಾಡುತ್ತಿದ್ದ 14 ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ. 2023 ೆ.2ರಲ್ಲಿ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 14 ಕೆಜಿ 950 ಗ್ರಾಂ ಅಂಬರ್ ಗ್ರೀಸ್ ಅನ್ನು ಕೊಳ್ಳೇಗಾಲ ಅರಣ್ಯ ಸಂಚಾರ ದಳದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಕೇರಳ ಮೂಲದ ಮೂವರು, ಕರ್ನಾಟಕದ ಒಬ್ಬ ಸೇರಿ ಒಟ್ಟು 4 ಆರೋಪಿಗಳನ್ನು ಬಂಧಿಸಲಾಗಿತ್ತು.
ಮೇ 27ರಂದು ಮುಡಿಗುಂಡ ಬಳಿ ಅಂಬರ್ ಗ್ರೀಸ್ ಸಾಗಿಸುತ್ತಿದ್ದ ಚಿಕ್ಕಮಂಗಳೂರು ಮೂಲದ ಇಬ್ಬರನ್ನು ಬಂಧಿಸಿದ್ದರು. 3 ಕೆಜಿ 500 ಗ್ರಾಂ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆಯಲಾಗಿತ್ತು.
ಆ.10ಲ್ಲಿ ಟಗರಪುರ ಬಳಿ ತಮಿಳುನಾಡು ಕಡೆಗೆ ಅಂಬರ್ ಗ್ರೀಸ್ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಇವರಿಂದ 3 ಕೆಜಿ 100 ಗ್ರಾಂ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆಯಲಾಗಿತ್ತು. 2024ರ ಫೆ.2ರಂದು ಕಾರಿನಲ್ಲಿ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬಳಿ 16 ಕೆಜಿ ಅಂಬರ್‌ಗ್ರೀಸ್ ಸಾಗಿಸುತ್ತಿದ್ದ ಮಂಗಳೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪೊಲೀಸರಿಂದ ಕಾರ್ಯಾಚರಣೆ: ಜುಲೈ ತಿಂಗಳಲ್ಲಿ ಹೊಸ ಅಣಗಳ್ಳಿ ಬಳಿ 3 ಕೆಜಿ 750 ಗ್ರಾಂ ಅಂಬರ್ ಗ್ರೀಸ್ ಸಾಗಿಸುತ್ತಿದ್ದ ಶಿವಮೊಗ್ಗ ಹಾಗೂ ಮೈಸೂರು ಮೂಲದ ಇಬ್ಬರನ್ನು ಕೊಳ್ಳೇಗಾಲ ಪಟ್ಟಣ ಪೊಲೀಸರು ಬಂಧಿಸಿದ್ದರು. ಇವರು ತಮಿಳುನಾಡಿನ ಕಡೆಗೆ ಅಂಬರ್ ಗ್ರೀಸ್ ಸಾಗಿಸುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಯಾಕಿಷ್ಟು ಬೇಡಿಕೆ? ತಿಮಿಂಗಿಲ ತಿಂದು ಜೀರ್ಣಿಸಿಕೊಳ್ಳಲಾಗದ ಆಹಾರವನ್ನು ವಾಂತಿ ಮಾಡುತ್ತದೆ. ಇದೇ ಅಂಬರ್ ಗ್ರೀಸ್ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಇದರ ಮಾರಾಟವನ್ನು ನಿಷೇಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡುವುದು, ಸಾಗಣೆ ಮಾಡುವುದು ಅಪರಾಧ. ವಿದೇಶಗಳಲ್ಲಿ ಮಾತ್ರ ವ್ಯವಹಾರ ಮಾಡಬಹುದಾಗಿದೆ. ಹೀಗಾಗಿ ಇಲ್ಲಿಂದ ವಿದೇಶಕ್ಕೆ ಸಾಗಣೆ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ತಿಮಿಂಗಿಲ ವಾಂತಿಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಸುಗಂಧ ದ್ರವ್ಯ ತಯಾರಿಕೆಗೆ ಬಳಕೆ ಮಾಡುತ್ತಾರೆ. ಆಹಾರ ಖಾದ್ಯಗಳಿಗೂ ಬಳಕೆ ಮಾಡಲಾಗುತ್ತದೆ. ಕೋಟ್ಯಂತರ ರೂ.ಗಳಿಗೆ ಮಾರಾಟವಾಗುತ್ತದೆ. ಆದ್ದರಿಂದ ಬಲು ದುಬಾರಿಯ ಕಳ್ಳಸಾಗಾಣಿಕೆ ವಸ್ತುವಾಗಿ ತಿಮಿಂಗಿಲ ವಾಂತಿ ಬೇಡಿಕೆಯಿಂದ ಕೂಡಿದೆ. ಸಮುದ್ರದಲ್ಲಿ ಸಿಗುವ ಇದನ್ನು ಬೇರೆ ಕಡೆಗೆ ಸಾಗಾಣಿಕೆ ಮಾಡುವಾಗ ಆರೋಪಿಗಳು ಸಿಕ್ಕಿ ಬೀಳುತ್ತಿದ್ದಾರೆ.
ಹಿಂದಿನಿಂದಲೂ ಬೇರೆ ಬೇರೆ ಕಡೆಗಳಿಂದ ತಿಮಿಂಗಿಲ ವಾಂತಿಯನ್ನು ಸಾಗಣೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ ತಮಿಳುನಾಡಿಗೆ ಕಾಡಿನಲ್ಲಿ ದಾರಿಯಲ್ಲಿ ಆರಾಮಾಗಿ ಹೋಗಬಹುದೆಂದು ಈ ಮಾರ್ಗದಲ್ಲಿ ಸಾಗಣೆ ಮಾಡುವುದರಿಂದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು. ಪುಣಜನೂರು ದೊರೆಸ್ವಾಮಿ, ಪರಿಸರವಾದಿ, ಚಾಮರಾಜನಗರ ಎಲ್ಲಿ ಸಾಗಣೆ ಮಾಡಲಾಗುತ್ತದೆ ಎನ್ನುವುದನ್ನು ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಗಡಿಪ್ರದೇಶಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತವೆ. ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿರುವ ಇತಿಹಾಸವಿರುವವರು ಇದನ್ನೇ ವ್ಯವಹಾರ ಮಾಡಿಕೊಂಡುಬಿಡುತ್ತಾರೆ. ಇಂತಹ ಸಂದರ್ಭಗಳೂ ಇವೆ. ನಮ್ಮ ಅಧಿಕಾರಿಗಳು ಕ್ರಿಯಾಶೀಲರಾಗಿದ್ದಾರೆ. ನಿರಂತರವಾಗಿ ಸಂಪರ್ಕದಲ್ಲಿದ್ದು, ಬೇರೆ ಕಡೆ ಮಾಹಿತಿ ತೆಗೆದುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಾ.ಆರ್.ಶಿವಕುಮಾರ್, ಎಸ್ಪಿ, ಅರಣ್ಯ ಸಂಚಾರ ದಳ