

ನಾಯಕನಹಟ್ಟಿ: ಮೈಸೂರು ದಸರಾ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ ಈ ಬಾರಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯ ಮತ್ತು ಜಾತ್ರೆಯ ಟ್ಯಾಬ್ಲೋ ಸಿದ್ಧಗೊಂಡಿದೆ.
ಮೆರವಣಿಗೆಯಲ್ಲಿ ನಾನಾ ಜಿಲ್ಲೆಯ ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆ ಪ್ರತಿನಿಧಿಸುವ ಸ್ತಬ್ಧ ಚಿತ್ರಗಳು ಪ್ರದರ್ಶಿತವಾಗಲಿವೆ. ಈ ಬಾರಿ ತಿಪ್ಪೇರುದ್ರಸ್ವಾಮಿ ದೇವಾಲಯ ಮತ್ತು ರಥದ ಸ್ತಬ್ಧ ಚಿತ್ರಕ್ಕೆ ಅವಕಾಶ ದೊರೆತಿದೆ.
ದೇವಾಲಯ ಮಧ್ಯ ಕರ್ನಾಟಕದಲ್ಲಿ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಒಳ, ಹೊರ ಹಾಗೂ ಏಕಾಂತೇಶ್ವರ ಮಠ ಪ್ರಮುಖವಾದ ಪ್ರೇಕ್ಷಣೀಯ ಸ್ಥಳಗಳಾಗಿವೆ. ಜಾತ್ರೋತ್ಸವದಲ್ಲಿ ರಾಜ್ಯ ಹಾಗೂ ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ. ಹೀಗಾಗಿ ಮೈಸೂರು ದಸರಾ ಮೆರವಣೆಗೆಯಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯ ಮತ್ತು ರಥದ ಸ್ತಬ್ಥ ಚಿತ್ರ ರೂಪ ತಳೆಯುತ್ತಿದೆ.
ಮುಂಭಾಗದಲ್ಲಿ ಎರಡು ಅಲಂಕೃತ ಆನೆಗಳಿವೆ. ಅದರ ಮಧ್ಯದಲ್ಲಿ ತಿಪ್ಪೇರುದ್ರಸ್ವಾಮಿಯ ಭಾವಚಿತ್ರ ಅಳವಡಿಸಲಾಗಿದೆ. ನಂತರ ಒಳಮಠದ ರಾಜಗೋಪುರದ ಪ್ರತಿಕೃತಿ ರಚಿಸಲಾಗಿದೆ. ಸ್ತಬ್ಧ ಚಿತ್ರದ ಮಧ್ಯಭಾಗದಲ್ಲಿ ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥ ಅದೇ ರೀತಿಯಲ್ಲಿ ಚಿತ್ರಿತವಾಗಿರುವುದು ವಿಶೇಷವಾಗಿದೆ.
ರಥದ ಪ್ರತಿಕೃತಿ ಸಂಪೂರ್ಣವಾಗಿ ನೈಜ ರಥದಂತೆ ಭಾಸವಾಗುತ್ತಿದೆ. ಟ್ಯಾಬ್ಲೋ ಹಿಂಭಾಗದಲ್ಲಿ ಹೊರಮಠದ ರಚನೆಯನ್ನು ಚಿತ್ರಿಸಲಾಗಿದೆ. ಹೊರಮಠದಲ್ಲಿರುವ ಗುಂಬಜ್ ಆಕಾರದ ಮತ್ತು ದೇವಾಲಯದ ಪ್ರತಿಕೃತಿ ಗಮನ ಸೆಳೆಯುತ್ತಿದೆ.
ಮೈಸೂರಿನಲ್ಲಿ ಸ್ತಬ್ಧಚಿತ್ರ ತಯಾರಿಕೆಯಲ್ಲಿ 15 ದಿನಗಳಿಂದ ಸಿ.ಕಣ್ಮೇಶ್ ನೇತೃತ್ವದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ.