ತಿಪ್ಪೆಗುಂಡಿಯಲ್ಲಿ ಹಾಸ್ಟೆಲ್ ನಿರ್ಮಾಣ, ಅವೈಜ್ಞಾನಿಕ ನಿರ್ಮಾಣ ತಂದ ಆಪತ್ತು ಸಮರ್ಪಕ ದಾಖಲೆಗಳೂ ಇಲ್ಲ

1
Published on

ಬೆಂಗಳೂರು ಗ್ರಾಮಾಂತರ: 2005ರಲ್ಲಿ ನಿರ್ಮಾಣವಾದ ದೊಡ್ಡಬಳ್ಳಾಪುರ ತಾಲೂಕು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೂಬಗೆರೆಯಲ್ಲಿನ ದೇವರಾಜ ಅರಸು ಬಾಲಕರ ವಿದ್ಯಾರ್ಥಿನಿಲಯ ಕುಸಿಯುವ ಹಂತ ತಲುಪಿದ್ದು, ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿದ ಜಾಗವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಕಟ್ಟಡದ ಸ್ಥಳ ಈ ಹಿಂದೆ ತಿಪ್ಪೆಗುಂಡಿಯಾಗಿತ್ತು. ಬಹಳ ವರ್ಷಗಳಿಂದ ಜೌಗು ಬಿದ್ದಿದ್ದ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರಿಂದಲೇ ಕಟ್ಟಡದ ಆಯಸ್ಸು ಮುಗಿಯುವಂತಾಗಿದೆ. ಜೌಗು ಪ್ರದೇಶವಾದ್ದರಿಂದ ಈ ಸ್ಥಳದಲ್ಲಿ ತೇವಾಂಶವಿದ್ದು, ಕಟ್ಟಡದ ಪಾಯ ಹಂತಹಂತವಾಗಿ ಕುಸಿಯುತ್ತಿದ್ದು, ಕಟ್ಟಡದ ಗೋಡೆಗಳು, ಛಾವಣಿ ಬಿರುಕು ಬಿಡತೊಡಗಿದೆ. ಯಾವ ಕ್ಷಣದಲ್ಲಾದರೂ ಕಟ್ಟಡ ಕುಸಿಯಬಹುದು ಎಂಬ ಸ್ಥಿತಿ ಇದೆ.

ಯಾರು ಹೊಣೆ?: ಕಟ್ಟಡ ನಿರ್ಮಾಣಕ್ಕೂ ಮೊದಲು ಅನುಮೋದನೆ ನೀಡಿದವರು ಯಾರು, ಲಕ್ಷಾಂತರ ರೂ. ಜನರ ತೆರಿಗೆ ಹಣ ಪೋಲಾಗಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹೊಣೆ ಹೊರಬೇಕು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಆದ ನಷ್ಟ ವಾಪಸ್ ಕೊಡಿಸಿ ವೈಜ್ಞಾನಿಕವಾಗಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ದಾಖಲೆಗಳೇ ಇಲ್ಲ!: ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ಬಗ್ಗೆ ಇಲಾಖೆಯಲ್ಲಿ ಸ್ಪಷ್ಟ ದಾಖಲೆಗಳೇ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾವ ವರ್ಷದಲ್ಲಿ ನಿರ್ಮಾಣವಾಯಿತು, ಗುತ್ತಿಗೆ ಪಡೆದವರು, ಮೇಲುಸ್ತುವಾರಿ ವಹಿಸಿದ ಅಧಿಕಾರಿಗಳು ಯಾರು ಎಂಬುದರ ಬಗ್ಗೆ ದಾಖಲೆಗಳ ಹುಡುಕಾಟ ನಡೆದಿದೆ ಎನ್ನಲಾಗಿದೆ.

ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ: ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಗಮನಕ್ಕೆ ಬಂದ ಕೂಡಲೇ ಈ ಹಿಂದೆಯೇ ಮಕ್ಕಳನ್ನು ಪ್ರೌಢಶಾಲೆಗೆ ಸ್ಥಳಾಂತರಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ಶೌಚಗೃಹ, ಊಟ ಉಪಾಹಾರ, ಮಲಗುವ ವ್ಯವಸ್ಥೆ ಸೇರಿ ಯಾವುದಕ್ಕೂ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗಿದೆ, ಸಮೀಪದಲ್ಲೇ ಖಾಸಗಿಯಾಗಿ ಬಾಡಿಗೆ ಕಟ್ಟಡದ ಹುಡುಕಾಟ ನಡೆಸಿದರೂ ಸೂಕ್ತ ಕಟ್ಟಡ ಸಿಗದ ಹಿನ್ನೆಲೆಯಲ್ಲಿ ಶಾಲೆಯಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಬಗ್ಗೆ ಕಾಳಜಿ ಇದೆ, ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭವ್ಯಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಇದೊಂದು ಗಂಭೀರ ವಿಚಾರ, ಸರ್ಕಾರದ ಯೋಜನೆಗಳನ್ನು ಕಾಟಾಚಾರಕ್ಕೆ ಅನುಷ್ಠಾನಗೊಳಿಸುವುದು ಅಕ್ಷಮ್ಯ, ಕೆಲವೇ ವರ್ಷದಲ್ಲಿ ಕಟ್ಟಡ ಶಿಥಿಲಗೊಂಡಿದೆ ಎಂದರೆ ಕಳಪೆ ಕಾಮಗಾರಿಯೇ ಪ್ರಮುಖ ಕಾರಣವಾಗಿದೆ, ಜತೆಗೆ ಕಟ್ಟಡ ನಿರ್ಮಾಣವಾದ ಜಾಗ ಜೌಗು ಪ್ರದೇಶವೆಂಬ ಮಾಹಿತಿ ಇದ್ದು ಸ್ಥಳ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗುವುದು. ನಿಸರ್ಗ ನಾರಾಯಣಸ್ವಾಮಿ, ಶಾಸಕ ದೇವನಹಳ್ಳಿ ಶಿಥಿಲಗೊಂಡಿರುವ ಕಟ್ಟಡ ಮಕ್ಕಳ ವಾಸ್ತವ್ಯಕ್ಕೆ ಯೋಗ್ಯವಲ್ಲ ಎಂಬ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ, ಹೊಸ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು ಅನುದಾನ ಬಿಡುಗಡೆಯಾದ ಕೂಡಲೇ ವೈಜ್ಞಾನಿಕವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಭವ್ಯಾ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net