

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಗೆ ನರಸಿಂಹನಹಳ್ಳಿ ಕ್ರಾಸ್‌ನಲ್ಲಿನ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಅಲಂಕಾರಿಕ ಹೂ ಬೆಳೆ ಹಾನಿಯಾಗಿದ್ದು, ಜಮೀನಿನಲ್ಲೇ ಕೊಳೆತ ಹೂ ಬೆಳೆಯನ್ನು ರೈತರು ತಿಪ್ಪೆಗೆ ಸುರಿದಿದ್ದಾರೆ.
ನರಸಿಂಹನಹಳ್ಳಿಯ ಶ್ರೀಕಾಂತ್ ಮತ್ತು ನರಸೇಗೌಡ ಎಂಬ ರೈತರು ಸಿಲೋಷಿಯಾ ಎಂಬ ಅಲಂಕಾರಿಕ ಹೂ ಬೆಳೆ ನಾಟಿ ಮಾಡಿದ್ದರು. ಕೊಲ್ಕತ್ತಾ, ಬಾಂಬೆ, ಮುಂಬೈ, ಹೈದರಾಬಾದ್ ಸೇರಿ ಇನ್ನಿತರ ಕಡೆಗಳಿಗೆ ಇದನ್ನು ರಪ್ತು ಮಾಡಲಾಗುತ್ತಿತ್ತು. ಈ ಜಾತಿಯ ಅಲಂಕಾರಿಕ ಹೂಗಳಿಗೆ ಹೊರ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆ ಇದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಅತೀವೃಷ್ಟಿ ನಿರಾಸೆ ತರಿಸಿದೆ. ಕೈ ಸೇರಬೇಕಿದ್ದ ಲಕ್ಷಾಂತರ ರೂ.ಮೌಲ್ಯದ ಬೆಳೆಯನ್ನು ತಿಪ್ಪೆಗೆ ಸುರಿಯುವಂತಾಗಿದೆ ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾರೋಬ್ಬರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.