

ಹುಬ್ಬಳ್ಳಿ : ಕಾಂಗ್ರೆಸ್‌ನ ಭಾರತ ಜೋಡೊ ಯಾತ್ರೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಏನೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಭಾನುವಾರದಂದು ಬೈಲಹೊಂಗಲಕ್ಕೆ ತೆರಳುವ ಮುಂಚೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಜನರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಜತೆಗೆ ಇದ್ದಾರೆ. ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯ ಇಲ್ಲ ಎಂದರು.
ಕಾಂಗ್ರೆಸ್‌ನವರು ಯಾತ್ರೆ, ರಥಯಾತ್ರೆಯಂತಹ ಏನೇ ಸರ್ಕಸ್ ಮಾಡಿದರೂ ಅವರು ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕಾಗಿ ಅವರು ನಡೆಸುತ್ತಿರುವ ಪ್ರಯತ್ನಗಳು ವಿಲವಾಗಲಿವೆ ಎಂದು ಹೇಳಿದರು.
ಸೆ. 22 ರಿಂದ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಅರಿವು ಇದ್ದು, ಜನರು ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.