ತಿಪಟೂರು ನಗರಕ್ಕೀಗ ನೀರಿನ ಆಘಾತ

02
Published on

ಹೇಮಾವತಿ ನೀರು ಸರಬರಾಜು ನಿಲ್ಲಿಸಿದ ನಗರಸಭೆ, ಈಚನೂರು ಕೆರೆಯೊಡಲಿಗೆ ಯುಜಿಡಿ ತ್ಯಾಜ್ಯ

ಮೂರ್ತಿ ಟಿಸಿಎಸ್​, ತಿಪಟೂರು

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ತಿಪಟೂರು ನಗರದ ಜನತೆಗೆ ಹೇಮಾವತಿ ನೀರು ಸರಬರಾಜು ನಿಲ್ಲಿಸುವ ಮೂಲಕ ನಗರಸಭೆ ಆಘಾತ ನೀಡಿದ್ದು, ವರ್ಷದಾರಂಭದಲ್ಲೇ ನೀರಿಗೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಅಂದಾಜು ಒಂದು ಲಕ್ಷ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ನಗರಸಭೆ, ನಗರಕ್ಕೆ ನೀರೊದಗಿಸುವ ಜಲಸಂಗ್ರಹಾಗಾರ ನಿರ್ಮಿಸಿರುವ ಈಚನೂರು ಕೆರೆಗೆ ವರ್ಷದಿಂದ ನಗರದ ಯುಜಿಡಿ ತ್ಯಾಜ್ಯ ಸೇರುತ್ತಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಸದ್ಯ, ಈಚನೂರು ಕೆರೆಯಲ್ಲಿ ನೀರಿದ್ದರೂ ಸರಬರಾಜು ಮಾಡಲಾಗದಷ್ಟು ಮತ್ತು ಸರಬರಾಜು ಮಾಡಿದರೂ ಕುಡಿಯಲು ಸಾಧ್ಯವಾಗದಷ್ಟು ಕಲುಷಿತವಾದ್ದರಿಂದ ಸರಬರಾಜನ್ನೇ ಸ್ಥಗಿತ ಮಾಡಲಾಗಿದೆ. ಆದರೆ, ಈಚನೂರಿನಲ್ಲಿರುವ ನೀರೆತ್ತುವ ಮೋಟಾರ್​ಗಳು ಹಾಳಾಗಿವೆ ಎಂದು ಜನರಿಗೆ ಉತ್ತರ ನೀಡಿ ಬೀಸೋ ದೋಣ್ಣೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಎಚ್ಚೆತ್ತುಕೊಳ್ಳದ ನಗರಸಭೆ:- ನಗರ ಸಮೀಪದ ಎಸ್​ಟಿಪಿ ಘಟಕಕ್ಕೆ ಯುಜಿಡಿ ತ್ಯಾಜ್ಯ ಪಂಪ್​ ಮಾಡುವ ಈಡೇನಹಳ್ಳಿ ಬಳಿಯ ಜಾಕ್​ವೆಲ್​ನ 100/200 ಅಶ್ವಶಕ್ತಿಯ ಮೋಟಾರ್​ ಕಳೆದ ವರ್ಷ ಹಾಳಾದ ಸಮಯದಲ್ಲಿ ಹೊಸ ಮೋಟಾರ್​ ಅಳವಡಿಸದ ಪರಿಣಾಮ ಜಾಕ್​ವೆಲ್​ನಿಂದ ಉಕ್ಕಿ ಹರಿದ ಯುಜಿಡಿ ಎಸ್​ಟಿಪಿ ಘಟಕ ಸೇರುವ ಬದಲು ಹಳ್ಳಗಳಲ್ಲಿ ಹರಿದು ಹಿಂಡಿಸ್ಕೆರೆ, ಈಚನೂರು, ಕೊಪ್ಪ ಮೂಲಕ ಕುಡಿಯುವ ನೀರಿನ ಜಲಸಂಗ್ರಹಾಗಾರ ಈಚನೂರು ಕೆರೆ ಸೇರುತ್ತಿತ್ತು. ಅದೇ ವೇಳೆಗೆ ಗೊರೂರು ಹೇಮಾವತಿ ಜಲಸಂಗ್ರಹಾಗಾರದಿಂದ ಟಿ.ಸುಬ್ಯಮಣ್ಯಂ ಎಡದಂಡೆ ನಾಲೆ ಮೂಲಕ(ತುಮಕೂರು ವರೆಗೂ) ನಿತ್ಯ 800ರಿಂದ 1200 ಕ್ಯೂಸೆಸ್​ ಹರಿಯುತ್ತಿದ್ದ ನೀರನ್ನು ನಾಲೆಯಿಂದ ಮೋಟಾರ್​ ಮೂಲಕ ಈಚನೂರು ಕೆರೆಗೆ ಭರ್ತಿ ಮಾಡಿಕೊಳ್ಳುವ ಪ್ರಹಸನವೂ ನಡೆಯಿತು. ಈ ಮಧ್ಯೆ ಯುಜಿಡಿ ಕಲುಷಿತ ಕುಡಿಯುವ ನೀರಿಗೆ ಸೇರುತ್ತಿದೆ ಎಂದು ಮಾಧ್ಯಮಗಳ ವರದಿ ಮತ್ತು ಸ್ಥಳಿಯ ರೈತರು ಮತ್ತು ಜನಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೂ ಎಚ್ಚೆತ್ತುಕೊಳ್ಳದ ನಗರಸಭೆ ಅಧಿಕಾರಿಗಳು, ನಾವು ಸರಬರಾಜು ಮಾಡುತ್ತಿರುವ ನೀರು ಕುಡಿಯಲು/ಬಳಸಲು ಯೋಗ್ಯವಾಗಿದೆ ಎಂದು ಸುಳ್ಳು ಹೇಳಿದ್ದರು. ಈ ಮಾತನ್ನು ನಂಬದ ಕೆಲವರು ಕೆರೆ ನೀರನ್ನು ಪ್ರಯೋಗಾಲಯಕ್ಕೆ ಕಳಿಸಿ, ಕಲುಷಿತವಾಗಿದೆ ಎಂಬ ವರದಿ ನೀಡಿದಾಗ ವರಸೆ ಬದಲಿಸಿದ ನಗರಸಭೆ, ನಾವು ಈಚನೂರುಕೆರೆಯಿಂದ ನಗರಕ್ಕೆ ನೀರು ಲಿಫ್ಟ್​ ಮಾಡುತ್ತಿಲ್ಲ. ನೇರವಾಗಿ ನಾಲೆ ನೀರನ್ನು ಲಿಫ್ಟ್​ ಮಾಡುತ್ತಿದ್ದೇವೆ. ಆದ್ದರಿಂದ ಸಮಸ್ಯೆ ಇಲ್ಲ ಎಂದು ಮತ್ತೊಮ್ಮೆ ಸಮರ್ಥಿಸಿಕೊಂಡಿತ್ತು.

ಕಾರ್ಯವೈಖರಿಗೆ ಟೀಕೆ: ಈಚನೂರು ಜಲಸಂಗ್ರಹಾಗಾರದಲ್ಲಿ ಹೇಮಾವತಿ ನೀರು ಶೇಖರಣೆಯಾದರೂ ಜನತೆಗೆ ಬಳಸುವ ಭಾಗ್ಯವಿಲ್ಲ. ಇನ್ನೊಂದೆಡೆ 6 ತಿಂಗಳ ಕಾಲ ಹೇಮಾವತಿ ನಾಲೆಯಲ್ಲಿ ನೀರು ಹರಿದರೂ ಕನಿಷ್ಠ 35 ಎಂಸಿಎಫ್​ಟಿ ಸಾಮರ್ಥ್ಯದ ನಗರದ ಅಮಾನಿಕೆರೆಯನ್ನೂ ಭರ್ತಿ ಮಾಡಿಕೊಳ್ಳುವಲ್ಲಿ ವಿಫಲವಾಗಿರುವ ನಗರಸಭೆ ಕಾರ್ಯವೈಖರಿ ಮತ್ತು ನೀರು ಸರಬರಾಜು ನಿಲ್ಲಿಸಿರುವ ಕುರಿತು ನಗರದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ಹೇಳಿಕೆ ಬದಲಿಸಿದ ಎಇಇ: ಈಚನೂರು ಭಾಗದ ರೈತರು ವಿರೋಧಿಸಿದ ಕಾರಣ ಹೇಮಾವತಿ ನೀರು ಸರಬರಾಜು ನಿಲ್ಲಿಸಲಾಗಿದೆ ಎಂದ ನಗರಸಭೆ ಎಇಇ ನಂತರ ಹೇಳಿಕೆ ಬದಲಿಸಿ ನೀರು ಕಲುಷಿತಗೊಂಡಿರುವ

ಕಾರಣ ಸರಬರಾಜು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ನೀರಿದ್ದರೂ ಜನತೆಗೆ ದಕ್ಕದ ಪರಿಸ್ಥಿತಿ ನಿಮಾರ್ಣವಾಗಿದ್ದು, ಜನತೆ ಟ್ಯಾಂಕರ್​ ಮೊರೆ ಹೋಗುವ ಕಾಲ ಸಮೀಪವಾಗಿದೆ.

ಬರಿದಾಗುತ್ತಿದೆ ನಾಲೆ: ಈಗ 8&-10 ದಿನಗಳಿಂದ ಗೊರೂರಿನಿಂದ ಬಿಡುಗಡೆಯಾಗುತ್ತಿದ್ದ ತಾಲೂಕಿನ ಪಾಲಿನ ನೀರನ್ನು ನಿಲ್ಲಿಸಲಾಗಿದ್ದು, ನಾಲೆ ಬರಿದಾಗುತ್ತಿದೆ. ನಾಲೆ ನೀರು ಮೋಟಾರಿಗೆ ಎಟಕುತ್ತಿಲ್ಲ. ನಗರಸಭೆ ಜನರಿಗೆ ಉತ್ತರಿಸುವ ಸ್ಥಿತಿಯಲ್ಲೂ ಇಲ್ಲ. ಈಗ ಮತ್ತೊಮ್ಮೆ ವರಸೆ ಬದಲಿಸಿದ ನಗರಸಭೆ, ನೀರಗಂಟಿಗಳಿಗೆ ಪಾಠ ಮಾಡಿ, ಜನ ಕೇಳಿದರೆ ಈಚನೂರಿನ ಮೋಟಾರ್​ಗಳು ಕೆಟ್ಟಿವೆ ಎಂದು ಉತ್ತರಿಸುವಂತೆ ತಿಳಿಸುವ ಮೂಲಕ ನಗರದ ಜನರಿಗೆ ನೀರಿಲ್ಲದಂತೆ ಮಾಡಿದೆ.

ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಿ: ನಗರಸಭೆ ಬೇಜವಾಬ್ದಾರಿಯಿಂದ ಈಚನೂರು ಕೆರೆ ಸೇರಿರುವ ಯುಜಿಡಿ ತ್ಯಾಜ್ಯ ನೀರನ್ನು ಹೇಗೆ ಖಾಲಿ ಮಾಡುತ್ತಾರೆ. ಮುಂದಿನ ವರ್ಷದ ಮಳೆಗಾಲದಲ್ಲಿ ಯಥಾಪ್ರಕಾರ ನಾಲೆಗೆ ಹೇಮಾವತಿ ನೀರು ಬಿಟ್ಟಾಗ ಅದನ್ನು ಎಲ್ಲಿಗೆ ತುಂಬಿಸಿಕೊಳ್ಳುತ್ತಾರೆ. ಯಾವ ರೀತಿ ನಗರದ ಜನತೆಗೆ ಪೂರೈಸುತ್ತಾರೆ ಎಂಬ ಸಾರ್ವಜನಿಕರ ಪ್ರಶ್ನೆಗೆ ನಗರಸಭೆಯ ಸಂಬಂಧಪಟ್ಟವರು ಉತ್ತರಿಸಬೇಕಿದೆ.

ಮನೆಗಿಷ್ಟು ಬಿಂದಿಗೆ ನೀರು: ಜಿಲ್ಲೆಯ ಜನತೆಗೆ ಹೇಮೆ ಲಭ್ಯವಾಗುತ್ತಿದ್ದರೂ ತಿಪಟೂರು ವಂಚಿತವಾಗಿದೆ. ಜನರು ನೀರಿಗಾಗಿ ಕೊಳವೆಬಾವಿ ಅಥವಾ ಟ್ಯಾಂಕರ್​ ಮೊರೆ ಹೋಗಬೇಕಾಗಿದೆ. ನಗರದ ಎಲ್ಲ ವಾರ್ಡ್​ಗಳಕೊಳವೆಬಾವಿಗಳಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ. ಅಮಾನಿಕೆರೆ ತುಂಬದ ಕಾರಣ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಟ್ಯಾಂಕರ್​ ಮೂಲಕ ಮನೆಗಿಷ್ಟು

ಬಿಂದಿಗೆ ನೀರು ಎಂದು ಬಿಡುತ್ತಿದ್ದು, ಇದಕ್ಕಾಗಿ ಕೆಲಸ, ಕಾರ್ಯ ಬಿಟ್ಟು ರಸ್ತೆಗೆ ಬರಬೇಕಾಗಿದೆ. ಎಲ್ಲ ನಗರವಾಸಿಗಳೂ ಹಣ ಕೊಟ್ಟು ನೀರು ಖರೀದಿ ಸುವಷ್ಟು ಶಕ್ತರಲ್ಲದ ಕಾರಣ ನೀರಿನ ಅಭಾವ ಎದುರಿಸಬೇಕಾಗುತ್ತದೆ.

ಡಿಸಿ ಸಭೆಯಲ್ಲಿ ತೀರ್ಮಾನಿಸಿದಂತೆ ನಗರದಲ್ಲಿ ಹೆಚ್ಚುವರಿ ಕೊಳವೆಬಾವಿ ಕೊರೆಸುವುದೂ ಸೇರಿ ಜನತೆಗೆ ನೀರಿನ ಅಭಾವ ಉಂಟಾಗದಂತೆ ಕ್ರಮವ ಹಿಸಲಾಗಿದೆ. ಈಚನೂರು ಕೆರೆ ಮತ್ತು ನಗರದ ಜನರಿಗೆ ಹೇಮೆ ನೀರು ಪೂರೈಸುವ ನಿಟ್ಟಿನಲ್ಲಿ ಮುಂದಿನ ವಾರ ಸರ್ಕಾರದಮಟ್ಟದಲ್ಲಿ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು.| ಕೆ.ಷಡಕ್ಷರಿ ಶಾಸಕ15 ದಿನಕ್ಕೊಮ್ಮೆ ಮನೆಗೆ 10ರಿಂದ 15 ಬಿಂದಿಗೆ ಲೆಕ್ಕದಲ್ಲಿ ಟ್ಯಾಂಕರ್​ ನೀರು ಬಿಡುತ್ತಿದ್ದಾರೆ. ಆದರೆ ವಯಸ್ಸಾದವರು ಮುನ್ನುಗ್ಗಿ ನೀರು ಪಡೆಯುವುದು ಕಷ್ಟ. ನಗರಸಭೆ ಬೇಜವಾಬ್ದಾರಿಗೆ ಜನರು ಬೆಲೆ ತೆರಬೇಕಾಗಿದೆ. ಬೇಸಿಗೆಗೂ ಮುಂಚೆ ನೀರಿನ ಅಭಾವ ಸೃಷ್ಟಿಯಾಗಿದೆ. ಟ್ಯಾಂಕರ್​ ನೀರಿಗೆ 350 ರೂ. ಕೊಡಬೇಕು. ಇಷ್ಟೆಲ್ಲದರ ಮಧ್ಯೆ ತಿಂಗಳಿಗೆ 140 ರೂ. ನೀರಿನ ಕರ ಕಟ್ಟಲೇಬೇಕು. ಜನತೆಗೆ ಸಮರ್ಪಕವಾಗಿ ನೀರು ಕೊಡದಿದ್ದರೂ ನೀರಿನ ಕರ ಮಾತ್ರ ನಗರಸಭೆ ವಸೂಲಿ ಮಾಡುತ್ತಿದೆ.|  ಎಂ.ಎಸ್​ ಚನ್ನಾಂಬಿಕಾ ಶಾರದಾನಗರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net