ತಿಗಳರ ಸಮುದಾಯ ಸಂಘಟನಾತ್ಮಕವಾಗಬೇಕಿದೆ: ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯಲ್ಲಿ ಎಚ್.ಪಿ. ಚನ್ನೇಗೌಡ ಕರೆ

28_HSN_11
Published on

ಹಾಸನ: ಎಲ್ಲಿವರೆಗೂ ನಾವು ಸಂಘಟಿತರಾಗುವುದಿಲ್ಲವೊ ಅಲ್ಲಿಯವರೆಗೂ ನಾವು ಏನು ಸಾಧನೆ ಮತ್ತು ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೆಲ್ಲಾ ಸಂಘಟಿತರಾಗಿ ಇಂತಹ ಜಯಂತಿಗೆ ಎಲ್ಲ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಪಿ. ಚನ್ನೇಗೌಡ ಕರೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯಲ್ಲಿ ಮಾತನಾಡಿದ ಅವರು, ಎಲ್ಲೊ ಒಂದು ಕಡೆ ಕರ್ನಾಟಕ ಸರ್ಕಾರ ನಮ್ಮ ಜನಾಂಗವನ್ನು ಕೂಡ ಗುರುತಿಸುವ ಕೆಲಸ ಮಾಡಿದೆ. ರಾಜ್ಯದಲ್ಲಿ ನಮ್ಮ ಜನಾಂಗದ ಸಂಖ್ಯೆ 40 ಲಕ್ಷಕ್ಕೂ ಹೆಚ್ಚು ಇದ್ದು, ಹಾಸನ ಜಿಲ್ಲೆಯಲ್ಲಿ ಆರರಿಂದ ಏಳು ಸಾವಿರ ಜನಸಂಖ್ಯೆ ಇರಬಹುದು. ಆದರೆ ಇಲ್ಲಿ ನಾವುಗಳು ಅಲ್ಪಸಂಖ್ಯಾತರು ಎನಿಸಿಕೊಂಡಿದ್ಧೇವೆ ಎಂದರು.

ನಮ್ಮ ಮುಖಂಡರಾದ ಪಿ.ಆರ್. ರಮೇಶ್ ಅವರು ಸರ್ಕಾರದಲ್ಲಿ ಒಂದು ಭಾಗವಾಗಿ ಕೆಲಸ ಮಾಡಿದ್ದು, ಏನು ಬೇಡಿಕೆ ಈಡೇರಬೇಕಾದರೆ ರಮೇಶ್ ಅವರು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ನಾವೆಲ್ಲಾ ಸಂಘಟಿತರಾಗಿ ಎಲ್ಲ ಗ್ರಾಮದಿಂದ ಇಂತಹ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ಆರಾಧ್ಯ ದೇವರು ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಆಗಿದ್ದರೂ ಕೂಡ ನಮ್ಮ ಸಮುದಾಯದಲ್ಲಿ ಶ್ರೀರಾಮನನ್ನು ಕೂಡ ಪೂಜಿಸುತ್ತೇವೆ. ತಮಿಳುನಾಡಿನಲ್ಲಿ ನಮ್ಮ ಜನಾಂಗದ 48 ಜನ ಶಾಸಕರು ಇದ್ದು, ತುಮಕೂರು ಜಿಲ್ಲೆಯಲ್ಲಿ ನಮ್ಮವರು ಬಹುಸಂಖ್ಯಾತರು. ಕನಿಷ್ಠ ಮೂವರು ಶಾಸಕರನ್ನು ಗೆಲ್ಲಿಸಬಹುದು. ಆದರೆ ನಮ್ಮಲ್ಲಿ ಸಂಘಟನೆಯ ಕೊರತೆ ಎದ್ದು ಕಾಣಿಸುತ್ತಿದೆ. ಎಲ್ಲಿವರೆಗೂ ನಾವು ಸಂಘಟಿತರಾಗುವುದಿಲ್ಲವೊ ಅಲ್ಲಿವರೆಗೂ ನಾವು ಏನು ಮಾಡುವುದಕ್ಕೂ ಸಾಧ್ಯವಿಲ್ಲ. ಆಗಿರುವ ತಪ್ಪನ್ನು ತಿದ್ದುಕೊಂಡು ಮುಂದೆ ಒಗ್ಗಟ್ಟನ್ನು ಪ್ರದರ್ಶಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ ಜ್ಯೋತಿ ಬೆಳಗುವುದರ ಮೂಲಕ ಹಾಗೂ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಉದ್ಘಾಟಿಸಿದರು.

ಇದೆ ವೇಳೆ ನಗರಸಭೆ ತಹಸೀಲ್ದಾರ್ ಅಶ್ವಿನಿ, ಶಾಂತಿಗ್ರಾಮ ವೃತ್ತದ ಆರಕ್ಷಕ ನಿರೀಕ್ಷಕರಾದ ಎ.ಟಿ. ಭಾನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ಪಿ. ತಾರಾನಾಥ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಆರ್.ಎಸ್. ಮಹೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net