

ಕೋಲಾರ: ಕಾಂಗ್ರೆಸ್ ಜಿಲ್ಲಾ ವಕ್ತಾರ, ತಿಗಳ ಸಮುದಾಯದ ಮುಖಂಡ ಎಲ್.ಎ.ಮಂಜುನಾಥ್‌ರನ್ನು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ಗೆ ನಾಮನಿರ್ದೇಶಕರನ್ನಾಗಿ ನೇಮಕ ಮಾಡಿ ಬಳಿಕ ನೇಮಕ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಇದಕ್ಕೆ ಕಾರಣರಾದ ಶಾಸಕ ಕೊತ್ತೂರು ಜಿ.ಮಂಜುನಾಥ್ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ತಿಗಳ ಸಮುದಯದ ಮುಖಂಡ ವೇಮಗಲ್ ಮುನಿಯಪ್ಪ ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಕೊತ್ತೂರು ಜಿ.ಮಂಜುನಾಥ್ ಗೆಲುವಿಗೆ ಎಲ್.ಎ.ಮಂಜುನಾಥ್ ಮತ್ತು ತಿಗಳ ಸಮುದಾಯ ಬೆಂಬಲವೂ ಕಾರಣವಾಗಿದ್ದು, ಇದನ್ನು ಮರೆತು ಅವರು ಒಂದು ಸಣ್ಣ ಹುದ್ದೆಯನ್ನು ಹಿಂಪಡೆಯುವಂತೆ ಮಾಡಿದ್ದು ಸರಿಯಲ್ಲ, ಇದು ಹಿಂದುಳಿದ ಸಮುದಾಯದ ಮುಖಂಡರೊಬ್ಬರನ್ನು ತುಳಿಯಲು ಹೊರಟಿರುವ ಪ್ರಯತ್ನವಾಗಿದೆ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮುಖಂಡ ಚಿನ್ನಪ್ಪ ಮಾತನಾಡಿ, ಈ ಹಿಂದೆ ಮುಳಬಾಗಿಲು ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಗೆಲ್ಲಲು ವಹ್ನಿಕುಲಸ್ಥರ ಬೆಂಬಲವೂ ಕಾರಣವಾಗಿತ್ತು. ಆದರೆ ಅದನ್ನು ಮರೆತಿರುವ ಅವರು ಕನಿಷ್ಟ ಸಣ್ಣ ಅಧಿಕಾರವನ್ನು ಸಹಿಸದೆ ವಾಪಸು ಪಡೆಯು ಕೆಲಸ ಮಾಡಿರುವುದು ಎಷ್ಟು ಸರಿ? ರಾಜ್ಯದಲ್ಲಿ ೪೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ತಿಗಳ ಸಮುದಾಯ ಕಾಂಗ್ರೆಸ್ ಅಧಿಕಾರ ಪಡೆಯಲು ದೊಡ್ಡ ಕೊಡುಗೆ ನೀಡಿದೆ. ಆದರೆ, ಸಮುದಾಯದವರಿಗೆ ಸರಿಯಾದ ಸ್ಥಾನಮಾನ ದೊರಕದೆ ಇರುವುದು ವಿಪರ್ಯಾಸವೆ ಸರಿ. ಹೇಗೋ ಒಂದೊಂದು ಸ್ಥಾನವನ್ನು ಕಲ್ಪಿಸಿದ್ದರೂ, ಅದನ್ನು ವಂಚಿಸುವ ಕೆಲಸ ಮಾಡುತ್ತಿರುವುದು ಬೇಸರ ತಂದಿದೆ ಎಂದು ತಿಳಿಸಿದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದ ಎಲ್.ಎ.ಮಂಜುನಾಥ್, ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂದು ಹಿಂದೆ ಸರಿದರು. ಅರ್ಜಿ ಸಲ್ಲಿಸದ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಯಿತು. ಆದರೂ ಸಮುದಾಯಕ್ಕೆ ಬೇಸರವಾಗಿಲ್ಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನವನ್ನು ಕಿತ್ತುಕೊಂಡಿರುವುದು ಸರಿಯಲ್ಲವೆಂದು ದೂರಿದರು.
ಮುಖಂಡ ರಂಗನಾಥ್ ಮಾತನಾಡಿ, ಜಿಲ್ಲೆಯಲ್ಲಿ ೧ ಲಕ್ಷಕ್ಕೂ ಅಧಿಕ ಮಂದಿ ತಿಗಳ ಸಮುದಾಯದವರಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಸಮುದಾಯದವನ್ನು ಕೀಳಾಗಿ ನೋಡುವ ಕೆಲಸವನ್ನು ಮಾಡಬಾರದು. ಮುಂದೆ ಇದರ ಪರಿಣಾಮವನ್ನು ಪಕ್ಷ ಎದುರಿಸುವ ಪರಿಸ್ಥಿತಿ ಬರುತ್ತದೆ. ಈ ವಿಷಯವಾಗಿ ಹಾಲಿ ಶಾಸಕರು, ಮುಖ್ಯ ಮಂತ್ರಿಯವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗುವುದು. ನ್ಯಾಯ ದೊರೆಯದ್ದಿದ್ದರೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಲಕ್ಷ್ಮಿಪತಿ, ವೆಂಕಟೇಶ್, ದೀಪು, ಗೋವಿಂದರಾಜು ಉಪಸ್ಥಿತರಿದ್ದರು.