

ಲಿಂಗದಹಳ್ಳಿ: ತಿಗಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನೀಲಮ್ಮ ಸುದೀಪ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್ ಕಾರ್ಯನಿರ್ವಹಿಸಿದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೀಲಮ್ಮ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ, ಪಿಡಬ್ಲುೃಡಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಗ್ರಾಪಂ ಸದಸ್ಯರೊಂದಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ತಿಳಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಜಿಪಂ, ತಾಪಂ, ಗ್ರಾಪಂಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಪಂ ಸದಸ್ಯರು ಲಭ್ಯ ಅನುದಾನದಲ್ಲೇ ನಿಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಹೆಚ್ಚಿನ ಅನುದಾನ ಬೇಕಿದ್ದಾಗ ಮಾತ್ರ ಶಾಸಕರು, ಸಂಸದರ ಬಳಿಗೆ ಹೊಗಿ ಅನುದಾನ ತಂದು ಅಭಿವದ್ಧಿ ಮಾಡಬೇಕು ಎಂದರು.
ತಿಗಡ ಮತ್ತು ನಂದಿಬಟ್ಟಲು ಗ್ರಾಪಂ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್‌ಗಳನ್ನು ಮಾಡಲಾಗಿದ್ದು, ಅರ್ಹರಿಗೆ ಮುಂದಿನ ಕೆಲ ದಿನಗಳಲ್ಲಿ ಮಸಾಶನ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಮಾತನಾಡಿ, ಈ ಬಾರಿ ಗ್ರಾಪಂ ಆಡಳಿತ ಅವಧಿಯಲ್ಲಿ ನಾಲ್ಕು ಸದಸ್ಯರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಅವರೆಲ್ಲರ ಸಲಹೆ, ಮಾರ್ಗದರ್ಶನ ಪಡೆದು ನೂತನ ಅಧ್ಯಕ್ಷರು ಕೆಲಸ ಮಾಡಬೇಕು. ತಾಲೂಕಿನ 46 ಗ್ರಾಪಂಗಳ ಅಭಿವದ್ಧಿಯಲ್ಲಿ ತಿಗಡ ಗ್ರಾಪಂ 26ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಅಗ್ರ ಸ್ಥಾನಕ್ಕೇರುವಂತಹ ಕಾರ್ಯಗಳನ್ನು ಮಾಡುವಂತೆ ಸಲಹೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಆರ್.ಮುರುಗ, ಮಾಜಿ ಅಧ್ಯಕ್ಷೆ ಶ್ರೀದೇವಿ ಸತೀಶ್, ಮಂಜುಳಾ ಶಿವದಾಸ್ ಎನ್.ಜಿ.ರಮೇಶ್, ಮೊಹ್ಮದ್ ಅಕ್ಬರ್, ಆರ್.ಸತೀಶ್, ಆರ್.ಗಗನ್, ಪಿಡಿಒ ಟಿ.ಶಿವಮೂರ್ತಿ ಇತರರಿದ್ದರು.