

ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಸಂಭವಿಸಿದ ಭೂಕಂಪನ ವ್ಯಾಪ್ತಿಯ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ವಿಜ್ಞಾನಿಗಳ ತಂಡ ಪರಿಶೀಲಿಸಿತು, ಅಲ್ಲದೆ ಒಂದು ತಿಂಗಳವರೆಗೂ ಕಂಪನ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಹಿರಿಯ ವಿಜ್ಞಾನಿಗಳಾದ ರಮೇಶ್ ದಿಕ್ಪಾಲ್ ಮತ್ತು ಸಂತೋಷ್ ಕುಮಾರ್ ತಾಲೂಕಿನ ಬಂಡಹಳ್ಳಿ, ಗುಂಡ್ಲ ಮಂಡಿಕಲ್ಲು, ಜೋನ್ನಲಕುಂಟೆ, ಪಿಲ್ಲಗುಂಡ್ಲಹಳ್ಳಿ ಗ್ರಾಮಗಳಲ್ಲಿ ಮಾಹಿತಿ ಸಂಗ್ರಹಿಸಿದರು. ಭೂಕಂಪನದ ಮೊದಲು ಮತ್ತು ಭೂಕಂಪನದ ಸಂದರ್ಭದಲ್ಲಿ ಪಾಲಿಸಬೇಕಾದ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸಿದರು.
ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಅಂತರ್ಜಲಮಟ್ಟದಲ್ಲಿ ಬದಲಾವಣೆಯಾಗಿದೆ. ಭೂಮಿಯ ಆಳಕ್ಕೆ ನೀರು ನುಸುಳುತ್ತಿದೆ. ಇದರಿಂದ ಸಹಜವಾಗಿ ಸಣ್ಣ ಪ್ರಮಾಣದಲ್ಲಿ ಕಂಪನಗಳು ಸಂಭವಿಸುತ್ತಿವೆ. ಇಂತಹ ಕಂಪನ ಅಲೆಗಳು ಭಾರಿ ಸದ್ದಿನೊಂದಿಗೆ ಮುಂದಿನ ತಿಂಗಳವರೆಗೂ ಮುಂದುವರಿಲಿವೆ ಎಂದು ರಮೇಶ್ ದಿಕ್ಪಾಲ್ ತಿಳಿಸಿದರು. ಜಿಲ್ಲೆ ಸುರಕ್ಷಿತ ಪ್ರದೇಶವಾಗಿದ್ದು, ಭೂಕಂಪನದ ಸಾಧ್ಯತೆಗಳು ಅತಿ ವಿರಳ. ಆದರೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರಂತರವಾಗಿ ಈ ಭಾಗದ ಮೇಲೆ ನಿಗಾವಹಿಸಿದೆ. ಜನರು ವದಂತಿಗಳಿಗೆ ಕಿವಿಗೊಡದಂತೆ ಧೈರ್ಯ ತುಂಬಿದರು.
ಭೂ ವಿಜ್ಞಾನಿಗಳಾದ ಕೃಷ್ಣವೇಣಿ, ಬಿ.ಎನ್.ಕೃಷ್ಣಮೂರ್ತಿ, ತಹಸೀಲ್ದಾರ್ ಗಣಪತಿಶಾಸ್ತ್ರಿ, ತಾಪಂ ಇಒ ಹರ್ಷವರ್ಧನ್ ಮತ್ತಿತರರು ಇದ್ದರು.