ತಿಂಗಳ ಪರ್ಯಂತ ಜ್ಞಾನದಾಸೋಹ

h1-Pravachan 5
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ಬಳಿ ಬಸವಂತಪ್ಪ ಹೊಸಮನಿ ಹಾಗೂ ಬಂಧುಗಳ ಹೊಲದಲ್ಲಿ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ತಿಂಗಳಪರ್ಯಂತ ಹಮ್ಮಿಕೊಂಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಧ್ಯಾತ್ಮಿಕ ಪ್ರವಚನದತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ.

ಮಾರ್ಚ್ ತಿಂಗಳಿಡಿ ನಿತ್ಯ ಬೆಳಗ್ಗೆ 6.30ರಿಂದ 7.30ರ ವರೆಗೆ ನಡೆಯುವ ಜ್ಞಾನದಾಸೋಹಕ್ಕೆ ಭಾನುವಾರ ವಿದ್ಯುಕ್ತ ಚಾಲನೆ ನೀಡಲಾಯಿತು. ಪರಿಸರ ಸ್ವಚ್ಛತೆ ಹಿನ್ನೆಲೆಯಲ್ಲಿ ಶ್ರೀಗಳ ಅಣತಿಯಂತೆ ವಿವಿಧ ಮಠಾಧೀಶರು ಧೂಪ ಹಾಕುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಗೋಕುಲ ಹಾಗೂ ಸುತ್ತಲಿನ ನಗರ ಮತ್ತು ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡಿದ್ದರು.

ಭಾರತದ ಆತ್ಮ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಭಾರತದ ಆತ್ಮ ಅಧ್ಯಾತ್ಮ. ಧರ್ಮ ಜೀವನ ಪದ್ಧತಿಯಾಗಿದೆ. ಇದಕ್ಕೆ ಸೀಮಿತ ಅರ್ಥ ಬೇಡ. ಯಾರಾದರೂ ತಪ್ಪು ಮಾಡಿದಾಗ ಇದು ಧರ್ಮ ಅಲ್ಲ ಎಂದು ಸಾಮಾನ್ಯವಾಗಿ ಹೇಳುತ್ತೇವೆ. ಧರ್ಮ ಪೂಜಾ ಪದ್ಧತಿಗೆ ವ್ಯತ್ಯಾಸ ಇದೆ. ಒಳ್ಳೆಯದನ್ನು ಮಾಡುವುದೇ ಧರ್ಮ, ಕುಟುಂಬದಲ್ಲಿ ಒಬ್ಬರಿಗಾಗಿ ಮತ್ತೊಬ್ಬರು ತ್ಯಾಗ ಮಾಡುವುದನ್ನು ತಾಯಿ ಕಲಿಸಿಕೊಡುತ್ತಾಳೆ. ಇಂತಹ ಆಧ್ಯಾತ್ಮಿಕ ವಿಚಾರಗಳೇ ಇಂದು ಭಾರತವನ್ನು ಉತ್ತುಂಗ ಸ್ಥಿತಿಯಲ್ಲಿ ಇಟ್ಟಿವೆ. ಜನರಲ್ಲಿ ಅಡಗಿರುವ ಇಂತಹ ಭಕ್ತಿ ಜಾಗೃತಗೊಳಿಸುವ ಕಾರ್ಯವನ್ನು ಶ್ರೀಗಳು ಮಾಡಲಿದ್ದಾರೆ. ಅವರ ಆಧ್ಯಾತ್ಮಿಕ ಚಿಂತನೆಗಳು ಮನಪರಿವರ್ತನೆ ಮಾಡುತ್ತವೆ ಎಂದರು.

ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಸರಳ ನಡೆ ನುಡಿಗೆ ಹೆಸರಾಗಿರುವ ಸಿದ್ಧೇಶ್ವರ ಸ್ವಾಮೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾದರಿ. ಅವರು ಈ ಹಿಂದೆ ವಿಜಯಪುರ ಆಶ್ರಮ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡುವ ಪ್ರಸ್ತಾಪ ಆದಾಗ ಬೇಡ ಎಂದು ನಯವಾಗಿ ತಿರಸ್ಕರಿಸಿದ್ದರು. ಹಾಗೆ ಹೇಳುವ ಸ್ವಾಮೀಜಿಗಳು ಸಿಗಲಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಇಂದಿನ ಒತ್ತಡದ ಬದುಕಿಗೆ ಸಿದ್ದೇಶ್ವರ ಸ್ವಾಮೀಜಿಯವರ ಆಧ್ಯಾತ್ಮಿಕ ಪ್ರವಚನ ಪರಿಹಾರವಾಗಬಲ್ಲದು. ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ನಾಳೆಯಿಂದ ಅಧಿವೇಶನ ಆರಂಭವಾಗಲಿದ್ದು, ವಾರದ ಕೊನೆಯ ಎರಡು ದಿನವಾದರೂ ಪ್ರವಚನದ ಅಮೃತ ಸವಿಯುತ್ತೇವೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗುರುಗಳ ಮಾತು ಆಲಿಸಲು ಬಂದಿದ್ದೇವೆ. ಅವರ ಅಮೃತವಾಣಿ ಕೇಳಿದರೆ ಜೀವನ ಪಾವನವಾಗುತ್ತದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಸಿದ್ದೇಶ್ವರ ಸ್ವಾಮೀಜಿ ಜ್ಞಾನದ ಬೆಳಕು, ಭಂಡಾರ. ಸ್ವಾಮಿ ವಿವೇಕಾನಂದರು ಅಂದು ತಮ್ಮ ಪ್ರವಚನದ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಅದೇ ರೀತಿ ಇಂದು ಸಿದ್ದೇಶ್ವರ ಶ್ರೀಗಳು ಜನಮನ ತಲುಪಿದ್ದಾರೆ ಎಂದರು.

ಶ್ರೀಗಳ ಆಶೀರ್ವಚನ: ಮನಗುಂಡಿಯ ಬಸವಾನಂದ ಸ್ವಾಮೀಜಿ, ಜಗತ್ತಿನ ಯಾವುದೇ ದೇಶದಲ್ಲಿ ನಡೆಯದ ಸಂಗತಿ ಇಲ್ಲಿ ನಡೆಯುತ್ತಿದೆ. ವಿಶ್ವದಲ್ಲಿ ಏನೆಲ್ಲ ನಡೆದರೂ ಕೊರೊನಾದಂತಹ ವೈರಸ್ ಇಲ್ಲಿಗೆ ಬರಲಿಲ್ಲ. ಇದಕ್ಕೆ ಪರಮಾತ್ಮನ ಸ್ಮರಣೆ ಕಾರಣ. ಸಂಸ್ಕೃತಿಯ ತಳಹದಿ ದೇಶಕ್ಕಿದೆ ಎಂದರು.

ದಯಾನಂದ ಆಶ್ರಮದ ಚಿದ್ರುಪಾನಂದ ಸ್ವಾಮೀಜಿ, ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗಿಂದ್ರ ಸ್ವಾಮೀಜಿ, ಗದಗ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಇತರರು ಮಾತನಾಡಿದರು.

ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ ಜ್ಞಾನ ಸೂರ್ಯ. ಅವರ ದರ್ಶನದಿಂದಲೇ ಬದುಕು ಬೆಳಗುತ್ತದೆ, ಚೈತನ್ಯ ತುಂಬುತ್ತದೆ. ಅವರೇ ನಿಜವಾದ ವಿರಕ್ತರು ಎಂದರು. ನಮ್ಮದೂ ವಿರಕ್ತಮಠ. ಕಾಂಪ್ಲೆಕ್ಸ್ ಬಾಡಿಗೆ, ಶಿಕ್ಷಣ ಸಂಸ್ಥೆ ಹೀಗೆ ಆಸ್ತಿ ಇದೆ. ಅದಕ್ಕಾಗಿಯೇ ಕಾದಾಟವೂ ನಡೆಯುತ್ತವೆ. ಇದನ್ನೆಲ್ಲ ನೋಡಿದರೆ ನಾಚಿಕೆಯಾಗುತ್ತದೆ ಎಂದೂ ಶ್ರೀಗಳು ವಿಷಾದಿಸಿದರು.

ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಡಿ.ಆರ್. ಪಾಟೀಲ, ಬಿ.ಡಿ. ಪಾಟೀಲ, ಜಿ.ವಿ. ವಳಸಂಗ, ದ್ಯಾವಪ್ಪನವರ, ಇತರರು ಇದ್ದರು. ರಾಜೇಶ್ವರಿ ಪಾಟೀಲ ಪ್ರಾರ್ಥಿಸಿದರು. ಶಾಸಕ ಅರವಿಂದ ಬೆಲ್ಲದ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಂಕ್ರಣ್ಣ ಮುನವಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net