ತಾವರೆಕೆರೆ ಒತ್ತುವರಿ ತೆರವುಗೊಳಿಸಿ

Published on

ಅರಕಲಗೂಡು: ತಾಲೂಕಿನ ಕಾರಗಲ್ ಗ್ರಾಮದ ತಾವರೆಕೆರೆ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಕೆರೆಯನ್ನು ಸಂರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ತಹಸೀಲ್ದಾರ್ ಮೋಹನ್ ಕುಮಾರ್ ಅವರಿಗೆ ಮನವಿ ನೀಡಿದರು.

ಗ್ರಾಮದ ಸರ್ವೇ ನಂ.3ರಲ್ಲಿ ಬರುವ ತಾವರೆಕೆರೆ ಪಹಣಿ ದಾಖಲೆ ಪ್ರಕಾರ 15.28 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದರಿಂದ 300 ಎಕರೆ ಕೃಷಿ ಭೂಮಿಗೆ ಮಳೆಗಾಲದಲ್ಲಿ ನೀರು ದೊರೆಯುತ್ತದೆ. ಅಲ್ಲದೆ ಗ್ರಾಮದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಗೂ ಹೆಚ್ಚು ಸಹಕಾರಿಯಾಗಿದೆ. ಇತ್ತೀಚೆಗೆ ಕೆರೆ ಅಕ್ಕಪಕ್ಕದಲ್ಲಿನ ಕೃಷಿ ಜಮೀನುಗಳ ಮಾಲೀಕರು ಅತಿಕ್ರಮಣ ಮಾಡಿ 5 ಎಕರೆಗೂ ಅಧಿಕ ಜಾಗದಲ್ಲಿ ತೋಟ, ಗದ್ದೆ, ಕೃಷಿ ಜಮೀನು ನಿರ್ಮಿಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಕೆರೆಯಲ್ಲಿ ನೀರಿನ ಸಾಂದ್ರತೆ ಕುಂಠಿತಗೊಂಡ ಹಿನ್ನೆಲೆ ಅಚ್ಚುಕಟ್ಟಿನ ಬೆಳೆಗೆ ನೀರು ಸಾಕಾಗುತ್ತಿಲ್ಲ ಎಂದು ದೂರಿದರು.

ಮಳೆಗಾಲದಲ್ಲಿ ಕೆರೆಯಲ್ಲಿನ ನೀರು ಸಾಧಾರಣ ಮಟ್ಟಿಗೆ ಸಾಕಾಗುತ್ತದೆ. ಬೇಸಿಗೆ ಬಂದರೆ ಇಡೀ ಕರೆಯಲ್ಲಿನ ನೀರು ಬತ್ತಿ ಹೋಗಿ ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತಿದೆ. ಇದರಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಯಲ್ಲಿ ನೀರು ಸಿಗದಿರುವ ಸಮಸ್ಯೆಯನ್ನು ಎದುರಿಸುತಿದ್ದೇವೆ. ಜಾನುವಾರುಗಳಿಗೂ ಕುಡಿಯುವ ನೀರು ಸಿಗುತ್ತಿಲ್ಲ. ತಾಲೂಕಿನಲ್ಲಿ ಅನೇಕ ಸರ್ಕಾರಿ ಕೆರೆಗಳ ಒತ್ತುವರಿಯನ್ನು ಬಿಡಿಸಿ ಸಂರಕ್ಷಣೆಯನ್ನು ತಾಲೂಕು ಆಡಳಿತ ಮಾಡುತ್ತಿದೆ. ಆದರೆ ಕಾರಗಲ್ಲು ಕೆರೆ ರಕ್ಷಣೆಗೆ ಮಾತ್ರ ಮುಂದಾಗಿಲ್ಲ ಎಂದು ಗ್ರಾಮಸ್ಥರಾದ ಜಗದೀಶ್, ಸಂದೇಶ್, ಪುಟ್ಟೇಗೌಡ ಆರೋಪಿಸಿದರು.

ಗ್ರಾಮಕ್ಕೆ ಭೇಟಿ ನೀಡಿ ಒತ್ತುವರಿ ಕೆರೆ ತೆರವಿಗೆ ಮುಂದಾಗುವ ವೇಳೆ ಇಡೀ ಗ್ರಾಮಸ್ಥರು ಖುದ್ದು ಹಾಜರಿದ್ದು ಸಹಕಾರ ನೀಡುತ್ತೇವೆ. ಬೇಸಿಗೆ ಕಾಲ ಈಗಾಗಲೇ ಆರಂಭವಾಗಿದೆ. ಕೆರೆಯಲ್ಲಿನ ನೀರನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮೋಹನ್‌ಕುಮಾರ್, ಸರ್ಕಾರಿ ಕೆರೆ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಒತ್ತುವರಿಯನ್ನು ಬಿಡಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದ ಮಹೇಶ್, ಕೇಶವೇಗೌಡ, ರಘುಪತಿ, ಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net