ತಾಳ್ಮೆ, ಸಹಬಾಳ್ವೆ ಕಲಿಸುವ ರಂಗಭೂಮಿ: ನಟ, ನಿರ್ದೇಶಕ ಆಸಿಫ್ ಕ್ಷತ್ರಿಯಾ

29
Published on

ಮೈಸೂರು: ರಂಗಭೂಮಿ ನಮಗೆ ತಾಳ್ಮೆ ಮತ್ತು ಸಹಬಾಳ್ವೆಯನ್ನು ಕಲಿಸುತ್ತದೆ. ರಂಗಭೂಮಿ ಪ್ರಾಂತ್ಯ, ಭಾಷೆ, ಜಾತಿ, ಮತ ಇವೆಲ್ಲವನ್ನೂ ಮೀರಿ ಬದುಕಲು ಪ್ರೇರೇಪಿಸುತ್ತದೆ ಎಂದು ನಟ, ನಿರ್ದೇಶಕ ಆಸಿಫ್ ಕ್ಷತ್ರಿಯಾ ಹೇಳಿದರು.

ಸಂಚಲನ ಮೈಸೂರು, ಬೆಂಗಳೂರಿನ ರಂಗರಥ ಕಲಾಮಂದಿರದ ತಾಲೀಮು ಕೊಠಡಿಯಲ್ಲಿ ಆಯೋಜಿಸಿರುವ ನಟನಾಭ್ಯಾಸ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ರಂಗಭೂಮಿ ಆತ್ಮಸ್ಥೈರ್ಯ, ಸಹನೆ, ತಾಳ್ಮೆಯನ್ನು ಕಲಿಸುತ್ತದೆ. ಹಾಗಾಗಿ ರಂಗಭೂಮಿ ಒಂದು ಚಳವಳಿಯಾಗಿ ನಡೆದು ಬಂದಿದೆ. ಎಲ್ಲರೊಂದಿಗೂ ಬೆರೆಯುವ ಗುಣದಿಂದ ಭೌಗೋಳಿಕ ಮತ್ತು ಮನಸ್ಸಿನ ಗಡಿಗಳನ್ನು ಅಳಿಸುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮಾತನಾಡಿ, ಸಂಚಲನ ಮೈಸೂರು ಸಂಸ್ಥೆ ದೀಪಕ್ ನೇತೃತ್ವದಲ್ಲಿ ಸತತವಾಗಿ ರಂಗಭೂಮಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈಗ ಬೆಂಗಳೂರಿನ ರಂಗರಥ ಸಹಯೋಗದೊಂದಿಗೆ ಆಯೋಜಿಸಿರುವ ಈ ನಟನಾಭ್ಯಾಸ ಶಿಬಿರ ವಿಶಿಷ್ಟವಾದುದ್ದು. ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ಮೂಲಕ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಚಲನ ಮೈಸೂರು ಅಧ್ಯಕ್ಷ ದೀಪಕ್ ಮೈಸೂರು, ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್‌ಬಾಬು, ನಟಿ ಶ್ವೇತಾ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net