

ಕಾರವಾರ: ಮನುಸ್ಮೃತಿಯಲ್ಲಿ ಉಲ್ಲೇಖಿಸಿದ ಹತ್ತು ಗುಣಗಳಲ್ಲಿ ಸಹನೆ, ಕ್ಷಮೆ, ತಾಳ್ಮೆ ಪ್ರಮುಖವಾದದ್ದು; ನಮ್ಮ ಜೀವನದ ಪ್ರತಿ ಹಂತದಲ್ಲಿ ಇದು ಅಗತ್ಯ. ತಾಳ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದ್ಭುತಗಳನ್ನು ಸಾಧಿಸಬಹುದು ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಗೋಕರ್ಣ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಹತ್ತನೇ ದಿನವಾದ ಶುಕ್ರವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. "ಸಹನೆಗೆ ಹೆಚ್ಚಿನ ಬಲ ಬೇಕು. ಅದ್ಭುತ ಮನೋಬಲವೂ ಬೇಕು. ಇಂಥ ಸಹನೆಯನ್ನು ನಾವು ರಾಮನಿಂದ ಪಡೆದುಕೊಳ್ಳಬೇಕು. ಕಷ್ಟ ಸಹಿಸುವ ಶಕ್ತಿ ಸಹನೆಯಿಂದ ಬರುತ್ತದೆ. ಸಹನೆ ತಪ್ಪಿದರೆ ಕೈಗೆ ಬಂದ ಭಾಗ್ಯವೂ ದಕ್ಕುವುದಿಲ್ಲ" ಎಂದು ವಿಶ್ಲೇಷಿಸಿದರು.
ಸಹನೆ ಕಳೆದುಕೊಂಡರೆ ನಮ್ಮ ಅರ್ಹ ಅಭ್ಯುದಯ ಕೈ ತಪ್ಪುತ್ತದೆ ಮಾತ್ರವಲ್ಲದೇ ಇದು ಅನಾಹುತಕ್ಕೂ ದಾರಿಯಾಗುತ್ತದೆ. ಸಹನೆ ತಪ್ಪಿದಲ್ಲಿ ದುಡುಕಿನಿಂದ ಅವಿವೇಕ ಉಂಟಾಗುತ್ತದೆ. ಇದು ಎಲ್ಲ ಆಪತ್ತುಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ತಾಳಿದವನು ಬಾಳಿಯಾನು ಎಂಬ ನಾಣ್ನುಡಿ ಹುಟ್ಟಿಕೊಂಡಿದೆ. ಮಾತನಾಡುವ ಮೊದಲು, ಹೆಜ್ಜೆ ಇಡುವ ಮೊದಲು ಸಮಾಧಾನ, ಸಮಾಲೋಚನೆ ಇದ್ದರೆ ಬದುಕು ಶ್ರೇಷ್ಠವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಂಪೆಕಟ್ಟೆ ಮಂಡಲದ ಶಿಷ್ಯಭಕ್ತರ ವತಿಯಿಂದ ಶುಕ್ರವಾಋ ಶ್ರೀಗುರುಭಿಕ್ಷೆ ನೆರವೇರಿತು. ಚಾತುರ್ಮಾಸ್ಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಕ್ರವಾರ ನವಚಂಡೀಯಾಗ ನಡೆಯಿತು.