ತಾಳೆಗರಿಯಲ್ಲಿ ರನ್ನನ ಗದಾಯುದ್ಧ…!

bkt-21-3
ತಾಳೆಗರಿ, ಮೊಮೆಂಟೋದೊಂದಿಗೆ ಡಾ.ಸಂಗಮೇಶ ಕಲ್ಯಾಣಿ
Published on

ಸಂತೋಷ ಕೃ ದೇಶಪಾಂಡೆ
ಬಾಗಲಕೋಟೆ: ಕವಿ ಚಕ್ರವರ್ತಿ ರನ್ನ ಕನ್ನಡ ಕಾವ್ಯ, ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮುಧೋಳ ತಾಲೂಕಿನ ರನ್ನ ಬೆಳಗಲಿ ಮೂಲವಾದರು ಇಂದಿಗೂ ರನ್ನನ ಇತಿಹಾಸ ಕಾವ್ಯ ಬಿಟ್ಟು ಬೇರೆಯಲ್ಲಿಯೂ ಕುರುಹು ಇಲ್ಲ. ಜೈನ ಸಂಪ್ರದಾಯದ ಐತಿಹ್ಯಗಳಿವೆ. ಆದರೇ ಹೊಸ ತೆಲೆಮಾರುಗಳಿಗೆ ರನ್ನನ್ನು ಪರಿಚಯ ಅಪರೂಪ. ಇದೀಗ ಹೊಸ ಯುಗಕ್ಕೆ ರನ್ನನ ಹೆಸರು ತಾಮ್ರಪಟ ದಾಖಲೀಕರಣ ಜೊತೆಗೆ ತಾಳೆಗರಿಯಲ್ಲಿ ಮಾಡುವ ಸಾಹಸ ಆರಂಭವಾಗಿದೆ..!!

ಮುಧೋಳದ ಹಿರಿಯ ಸಂಶೋಧಕ, ಮೂಡಿ ಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿ ಹೊಸ ಯುಗಕ್ಕೆ ವಿಭಿನ್ನ ರೂಪದ ಪ್ರಯತ್ನಕ್ಕೆ ಮುಂದಾಗಿದ್ದು, ಹಲವರು ಇದಕ್ಕೆ ಕೈ ಜೋಡಿಸಿದ್ದಾರೆ. ಕಾವ್ಯದಲ್ಲಿ ಮೂಡಿ ಬಂದಿರುವ ರನ್ನನ ಗದಾಯುದ್ಧವನ್ನು ತಾಳೆಗರಿಯಲ್ಲಿ ಮೂಡಿಸಲು ಮುಂದಾಗಿದ್ದಾರೆ.
ಕವಿ ಚಕ್ರವರ್ತಿ ರನ್ನ ಗದಾಯುದ್ಧವನ್ನು ಪದ್ಯ ರೂಪದಲ್ಲಿ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ತಿ.ನಂ.ಶ್ರೀ ಹಳೇಕನ್ನಡದಲ್ಲಿ ಗದಾಯುದ್ಧವನ್ನು ದಾಖಲಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿರುವುದನ್ನು ಆಯ್ಕೆ ಮಾಡಿಕೊಂಡು ಅವತರಣಿಕೆ ಸಹಿತ ಆಯ್ದ ೩೦೦ ಪದ್ಯಗಳನ್ನು ತಾಳೆಗರಿಯಲ್ಲಿ ಬರೆಯಲಾಗುತ್ತದೆ. ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ದೊರೆಯುವ ತಾಳೆಗರಿ ಆಮದು ಮಾಡಿಕೊಂಡು ತಾಮ್ರದ ಕಡ್ಡಿಯಿಂದ ಪದ್ಯಗಳನ್ನು ಬರೆಯಲಾಗುತ್ತದೆ. ೮೦ ರಿಂದ ೯೦ ಸಾವಿರ ವೆಚ್ಚದಲ್ಲಿ ಅಂದಾಜು ಒಂದು ವರ್ಷದಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ.

ಮೊಮೆಂಟೋದಲ್ಲಿ ಗದಾಯುದ್ಧ ಕೆತ್ತನೆ..
ಇಂದು ಮದುವೆ, ಜನುಮ ದಿನ ಸೇರಿದಂತೆ ವಿವಿಧ ಶುಭಸಮಾರಂಭದಲ್ಲಿ ಊಡುಗೊರೆ ನೀಡುವುದು ಸಾಮಾನ್ಯ. ಅದರಲ್ಲೂ ಪಾಶ್ಚಿಮಾತ್ಯ ಸಂಸ್ಕೃತಿಯ ಮೊಮೆಂಟೋಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ರನ್ನ ಹಾಗೂ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಡಾ.ಸಂಗಮೇಶ ಕಲ್ಯಾಣಿ ಅವರು ಮೊಮೆಂಟೋದಲ್ಲಿ ಗದಾಯುದ್ಧವನ್ನು ಕೆತ್ತನೆ ಮಾಡಿ ವಿತರಣೆ ಮುಂದಾಗಿದ್ದಾರೆ. ತನ್ಮೂಲಕ ಕನ್ನಡ ಬದುಕಿನ ಭಾಷೆಯಾಗಬೇಕು ಎನ್ನುವುದು ಆಶಯ.

ಈ ಕುರಿತು ಡಾ.ಸಂಗಮೇಶ ಕಲ್ಯಾಣಿ ವಿಜಯವಾಣಿಯೊಂದಿಗೆ ಮಾತನಾಡಿ, ಕವಿ ಚಕ್ರವರ್ತಿ ರನ್ನನ ಸಮಾಧಿ ಮನೆ ಯಾವುದೇ ಕುರುಹು ಇಲ್ಲ. ನಾಡಿನ ಹಿತ ಚಿಂತಕ ತಿ.ನಂ.ಶ್ರೀಗಳು ಗದಾಯುದ್ಧವನ್ನು ಹಳೇಗನ್ನಡದಲ್ಲಿ ಮೈಸೂರು ವಿವಿಯಲ್ಲಿ ಉಳಿಸಿದ್ದಾರೆ. ನಮ್ಮ ಭಾಗದ ರನ್ನನನ್ನು ಇತಿಹಾಸದಲ್ಲಿ ದಾಖಲಿಸುವ ಕೆಲಸ ಮಾಡುವ ಆಲೋಚನೆ ಮಾಡಿ ತಾಮ್ರಪಟದಲ್ಲಿ ಪದ್ಯಗಳನ್ನು ಮುದ್ರಿಸಲಾಗಿದೆ. ಜ.೨೨ ರಂದು ಬಿಡುಗಡೆಗೊಳಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗುವುದು. ಇದೀಗ ತಾಳೆಗರಿಯಲ್ಲಿ ರನ್ನನ ಗದಾಯುದ್ಧ ಮೂಡಿಸಲಾಗುವುದು. ೧ ವರ್ಷದಲ್ಲಿ ಅಂತಿಮ ಸ್ವರೂಪ ದೊರೆಯಲಿದೆ. ಅಂದಾಜು ೩೦೦ ತಾಳೆಗರಿಯಲ್ಲಿ ಗದಾಯುದ್ಧ ಮೂಡಿಬರಲಿದೆ. ಅದು ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net