ತಾಳೆಗರಿ, ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಐತಿಹಾಸಿಕ ಮಹತ್ವ ಪಡೆದಿರುವ ಹಳೇ ಕಾಲದ 70 ಸಾವಿರ ತಾಳೆಗರಿ ಮತ್ತು ಹಸ್ತಪ್ರತಿಗಳನ್ನು ಸಂರಕ್ಷಿಸುವ ಡಿಜಿಟಲೀಕರಣ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಅಧ್ಯಯನಕ್ಕಾಗಿ ಶೀಘ್ರದಲ್ಲೇ ಸಂಶೋಧಕರು, ವಿದ್ಯಾರ್ಥಿಗಳಿಗೆ ದೊರೆಯಲಿವೆ.

ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ

mysore
ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆ ವತಿಯಿಂದ ಈ ಮಹತ್ವದ ಕಾರ್ಯ ನಡೆಯುತ್ತಿದ್ದು, ಅಪರೂಪದ ತಾಳೆಗರಿಗಳ ಡಿಜಿಟಲ್ ಸ್ಪರ್ಶ ನೀಡುವ ಕೆಲಸ ಪೂರ್ಣಗೊಂಡಿದ್ದು, ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯದಲ್ಲೂ ಶೇ.90ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಕೆಲಸವೂ ತ್ವರಿತಗತಿಯಲ್ಲಿ ಸಾಗಿದೆ.

ಡಿಜಿಟಲೀಕರಣ ರೂಪಕ್ಕೆ ಪರಿವರ್ತನೆ ಮಾಡುವುದರಿಂದ ಹಸ್ತಪ್ರತಿ, ತಾಳೆಪತ್ರಗಳನ್ನು ಸುಲಭವಾಗಿ ಓದಲು, ಸಂಶೋಧನೆ ನಡೆಸಲು ದೊಡ್ಡ ಆಕರವೇ ಸಿಗಲಿದೆ.

ಪುರಾತನ ಹಸ್ತಪ್ರತಿಗಳು ಬೌದ್ಧಿಕ ಆಸ್ತಿ. ಇದರಲ್ಲಿ ಜ್ಞಾನ ಭಂಡಾರವನ್ನು ತಂತ್ರಜ್ಞಾನ ಮೂಲಕ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮದೊಂದಿಗೆ ಡಿಜಿಟಲೀಕರಣಗೊಳಿಸಿ ಅಂತರ್ಜಾಲದ ಮೂಲಕ ಇದು ಸುಲಭವಾಗಿ ದೊರೆಯುವಂತೆ ಮಾಡಲಾಗುತ್ತಿದೆ.

2022ರ ಮೇ ನಲ್ಲಿ ಶುರುವಾದ ಈ ಪ್ರಕ್ರಿಯೆ ಕೊನೇ ಹಂತಕ್ಕೆ ಬಂದಿದೆ. 25 ಸಾವಿರಕ್ಕೂ ಹೆಚ್ಚು ಕಟ್ಟುಗಳಿರುವ ಹಸ್ತಪ್ರತಿಗಳ ಡಿಜಿಟಲೀಕರಣದ ಜತೆಗೆ, ಅತ್ಯಂತ ಹಳೆಯದಾದ, ಕೀಟಬಾಧೆಯಿಂದ ಹಾಳಾಗುತ್ತಿರುವ ತಾಳೆಗರಿಗಳ ಸಂರಕ್ಷಣೆ ಮಾಡಲಾಗಿದೆ.

ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯು 1.50 ಕೋಟಿ ರೂ. ವೆಚ್ಚದಲ್ಲಿ ಈ ಪ್ರಕ್ರಿಯೆಗೆ ಆರ್ಥಿಕ ಸಹಾಯ ಮಾಡಿದ್ದು, ಸೊಸೈಟಿಯ 37 ಜನರು, ಸಂಶೋಧನಾ ಸಂಸ್ಥೆಯ ಸಿಬ್ಬಂದಿ ಹಾಗೂ ಮಹಾರಾಜ ಕಾಲೇಜಿನ ಪ್ರಾಚ್ಯ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಸಂರಕ್ಷಣೆ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಡಿಜಿಟಲೀಕರಣ ಪ್ರಕ್ರಿಯೆ ಹೇಗೆ?:

ಹಸ್ತಪ್ರತಿಗಳ ಕಟ್ಟುಗಳಲ್ಲಿರುವ ಧೂಳನ್ನು ತೆಗೆದು, ಲೆಮನ್ ಗ್ರಾಸ್ ತೈಲ ಬಳಸಿ, ಫಂಗಸ್ ಅನ್ನು ತೆಗೆಯಲಾಗುತ್ತದೆ. ಸಿಜೂರ್ ಸ್ಯಾನರ್‌ನಲ್ಲಿ ಸ್ಕ್ಯಾನ್ ಮಾಡಿ ತಾಳೆಗರಿ, ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಪಿಡಿಎಫ್, ಜೆಪಿಇಜಿ ಮಾದರಿಯಲ್ಲಿ ಸಂರಕ್ಷಿಸಲಾಗುತ್ತಿದೆ. ಸ್ಕ್ಯಾನ್ ಮಾಡಿದ ನಂತರ ಗಂಜಿ ಮುಕ್ತ ಕೆಂಪುಬಟ್ಟೆಯಲ್ಲಿ ಸುತ್ತಿಡಲಾಗುತ್ತದೆ.

ತಾಳೆಗರಿ, ಹಸ್ತಪ್ರತಿಗಳ ಬಂಢಾರ:

ತತ್ವಶಾಸ್ತ್ರ, ಧರ್ಮ, ಸಾಹಿತ್ಯ, ಭಾಷಾ ವಿಜ್ಞಾನ, ಜೋತಿಷ್ಯ, ನ್ಯಾಯ, ವೇದಾಂತ, ಅಲಂಕಾರ ಶಾಸ್ತ್ರ, ಶಿಲ್ಪಶಾಸ್ತ್ರ, ಪುರಾಣಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸೇರಿದ ಸಂಸ್ಕೃತ, ಕನ್ನಡ, ಪ್ರಾಕೃತ, ತಿಗಳಾರಿ ಸೇರಿದಂತೆ ಹಲವು ಭಾಷೆಗಳ ತಾಳೆಗರಿಗಳು ಇಲ್ಲಿವೆ. ಜತೆಗೆ, ಧರ್ಮಶಾಸ್ತ್ರ, ಭಾಷಾಶಾಸ್ತ್ರ, ಕೌತಕಶಾಸ್ತ್ರ, ಘನಶಾಸ್ತ್ರ, ವೈಮಾನಿಕಶಾಸ್ತ್ರ, ಆಯುರ್ವೇದಶಾಸ್ತ್ರ ಹೀಗೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಹಸ್ತಪತ್ರಿಗಳೂ ಇವೆ. ಈ ಪೈಕಿ ಶೇ.25ರಷ್ಟು ಭಾಗ ಆಯುರ್ವೇದಶಾಸ್ತ್ರಕ್ಕೆ ಸಂಬಂಧಿಸಿದ ಹಸ್ತಪತ್ರಿಗಳಿವೆ ಎಂಬುದು ಗಮನಾರ್ಹ.

ಅಮೂಲ್ಯ ಕೃತಿಗಳಿಗೂ ಡಿಜಿಟಲ್ ಸ್ಪರ್ಶ:

2,300 ವರ್ಷಗಳ ಇತಿಹಾಸವಿರುವ ಕೌಟಿಲ್ಯನ ಅರ್ಥಶಾಸ್ತ್ರ, ಶಂಕರಾಚಾರ್ಯರ ಸೌಂದರ್ಯ ಲಹರಿ, ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ವ ನಿಧಿಯಂಥ ಅಮೂಲ್ಯ ಕೃತಿಗಳಿಗೂ ಡಿಜಿಟಲ್ ಸ್ಪರ್ಶ ನೀಡಲಿದೆ.

ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿಯಿಂದಾಗಿಯೇ ಸಂಸ್ಥೆಗೆ ದೊಡ್ಡ ಹೆಸರು ಬಂದಿದೆ. ವಿದ್ವಾಂಸ ಆರ್. ಶಾಮಾಶಾಸ್ತ್ರಿ ಅವರು, ತಮಗೆ ಸಿಕ್ಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಇಲ್ಲಿರಿಸಿ, ಸಂಸ್ಕೃತ, ಇಂಗ್ಲಿಷ್‌ಗೂ ಅನುವಾದಿಸಿದ್ದರು. ದೇಶದಲ್ಲಿ ಅಲ್ಲಿಯವರೆಗೂ ಮೆಗಸ್ತನೀಸ್, ಬಾಣನ ಕೃತಿಗಳೇ ಪ್ರಾಚೀನವಾಗಿದ್ದವು.

ನೈಜಪ್ರತಿಯಾದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ರಾಜಕೀಯ, ಹಣಕಾಸು, ಸೈನ್ಯ, ವಿಜ್ಞಾನ, ವ್ಯವಹಾರ, ಅಧಿಕಾರ, ನ್ಯಾಯ, ಸರ್ಕಾರದ ವಿಷಯಗಳು, ಮುತ್ತುರತ್ನಗಳ ಜ್ಞಾನ ಮತ್ತು ಅದಿರು ಸಂಸ್ಕರಣೆ (ಮೆಟಲರ್ಜಿ) ವಿಷಯ ಅದರಲ್ಲಿದೆ. ಜತೆಯಲ್ಲಿ ಆನೆ, ಕುದುರೆಗಳ ತರಬೇತಿ, ಕಂದಾಯ ವಿಚಾರವೂ ಅದರಲ್ಲಿ ಉಲ್ಲೇಖವಾಗಿದೆ.

ಚಿಕ್ಕ, ದೊಡ್ಡ ಗಾತ್ರದ ಹಸ್ತಪ್ರತಿ:

ಜಗತ್ತಿನ ಅತಿ ದೊಡ್ಡ ಮತ್ತು ಅತಿ ಚಿಕ್ಕಗಾತ್ರದ ಹಸ್ತಪ್ರತಿ ಇಲ್ಲಿದೆ. ‘ವೀರ ಮಹೇಶ್ವರ ಆಚಾರ್ಯ’ ಅತಿ ದೊಡ್ಡ ಹಸ್ತಪ್ರತಿ. ಇದು 90 ಸೆಂಟಿಮೀಟರ್ ಉದ್ದ ಇದೆ. ನೀಲಕಂಠನಾಗನಾಥ ಆಚಾರ್ಯ ಇದನ್ನು ಸಂಗ್ರಹಿಸಿದ್ದಾರೆ. ಇದು ಕನ್ನಡ ಭಾಷೆಯಲ್ಲಿರುವ ‘ವೀರಶೈವಿಸಂ’ ವಿಷಯವನ್ನು ಆಧರಿಸಿದೆ. ಬಸವರಾಜಯ್ಯ ಎಂಬುವವರು ಇದನ್ನು ಅರ್ಧದಷ್ಟು ಎಡಿಟ್ ಮಾಡಿದ್ದಾರೆ. ಇನ್ನೂ ಬೆಂಕಿಪೊಟ್ಟಣ ಗಾತ್ರದಷ್ಟು ಹಸ್ತಪ್ರತಿಯ ಭಗವದ್ಗೀತಾ ಗ್ರಂಥ ಇದೆ. ಅದು 18 ಅಧ್ಯಾಯವನ್ನು ಒಳಗೊಂಡಿದೆ. ಇದನ್ನು ರಚಿಸಲು ಹೇಗೆ ಸಾಧ್ಯವಾಯಿತು ಎಂಬದು ಈಗಲೂ ಕುತೂಹಲಕರ ಸಂಗತಿ.

ಸಂಸ್ಥೆಗೆ 134 ವರ್ಷ ಇತಿಹಾಸ:

ಪ್ರಾಚ್ಯವಿದ್ಯಾ ಸಂಶೋಧನಾಲಯವು ಜ್ಞಾನ ಪ್ರಸಾರ ಮಾಡುತ್ತಿರುವ ಸಂಸ್ಥೆ. 1891ರಲ್ಲಿ 10ನೇ ಚಾಮರಾಜ ಒಡೆಯರ್ ಅವರು ಸ್ಥಾಪಿಸಿದ ಈ ಸಂಸ್ಥೆಯು ಮೈಸೂರು ವಿಶ್ವವಿದ್ಯಾಲಯಕ್ಕಿಂತಲೂ ಪುರಾತನ ಅಧ್ಯಯನ ಕೇಂದ್ರವಾಗಿದೆ. ಮೈವಿವಿಗೆ 109 ವರ್ಷ, ಈ ಸಂಸ್ಥೆಗೆ 134 ವರ್ಷದಷ್ಟು ಚರಿತ್ರೆ ಇದೆ.

ಪ್ರಾಚೀನ ತಾಳೆಗರಿಗಳ ಡಿಜಿಟಲೀಕರಣದ ಕೆಲಸ ಪೂರ್ಣಗೊಂಡಿದ್ದು, ಹಸ್ತಪ್ರತಿಗಳಿಗೆ ಶಾಶ್ವತವಾಗಿ ಡಿಜಿಟಲ್ ರೂಪ ನೀಡುವ ಕೆಲಸ ಶೇ.90ರಷ್ಟು ಪೂರ್ಣಗೊಂಡಿದೆ. ಉಳಿಕೆ ಕೆಲಸವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಡಾ.ಡಿ.ಪಿ.ಮಧುಸೂದನ ಆಚಾರ್ಯ ನಿರ್ದೇಶಕ, ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆ, ಮೈವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net