

ಇಂಡಿ: ತಾಳೆ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಬರುವ ಬೆಳೆಯಾಗಿದೆ. ಇದಕ್ಕೆ ಯಾವುದೆ ಕೀಟಬಾಧೆ ಇರುವುದಿಲ್ಲ. ಮಾರಾಟಕ್ಕಾಗಿ ಇನ್ನೊಬ್ಬರಿಗೆ ಕಮಿಷನ್ ಕೊಡಬೇಕಾಗಿಲ್ಲ. ನೇರವಾಗಿ ಕಂಪನಿಯವರೆ ನಿಮ್ಮಲ್ಲಿಗೆ ಬಂದು ತಾಳೆ ಹಣ್ಣು ತೆಗೆದುಕೊಂಡು ಹೋಗಿ ನಿಮ್ಮ ಖಾತೆಗೆ ಹಣ ಜಮೆ ಮಾಡುತ್ತಾರೆ. ಅದಕ್ಕಾಗಿ ರೈತರು ತಾಳೆ ಬೆಳೆಯುವುದು ಸೂಕ್ತ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ ಹೇಳಿದರು.
ತಾಲೂಕಿನ ಹಿರೇವನೂರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ 3ಜಿ ಆಯಿಲ್ ಪಾಮ್ ಪ್ರೈವೇಟ್ ಕಂಪನಿ ವತಿಯಿಂದ ಯಲ್ಲಪ್ಪಾ ವಾಂಗಿ ಇವರ ತೋಟದಲ್ಲಿ ತಾಳೆ ಸಸಿ ನೆಡುವ ಮೂಲಕ ಮೆಗಾಡ್ರೈವ್ ಪಾಮ್ ಪ್ಲಾಂಟೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನ್ಯ ದೇಶಗಳಿಂದ ಪಾಮ್ ಎಣ್ಣೆ ಆಮದು ಮಾಡಿಕೊಳ್ಳುತ್ತಿರುವುದರಿಂದ ಇದನ್ನು ಹೋಗಲಾಡಿಸುವ ಸಲುವಾಗಿ ನಮ್ಮ ದೇಶದಲ್ಲಿ ತಾಳೆ ಬೆಳೆಯಲಾಗುತ್ತಿದೆ. ನಾಟಿ ಮಾಡಿದ ಎರಡೂವರೆ ವರ್ಷದ ಅವಧಿಯಲ್ಲಿ ಬೆಳೆ ಹಣ್ಣು ಕೊಡಲು ಪ್ರಾರಂಭಿಸುತ್ತದೆ. ಇದಕ್ಕೆ ಯಾವುದೇ ಕೀಟನಾಶಕ ಸಿಂಪರಣೆ ಮಾಡುವ ಅಗತ್ಯವಿಲ್ಲ. ಕೇವಲ ನೀರು, ಗೊಬ್ಬರ ಕೊಟ್ಟರೆ ಸಾಕು ನಿರಂತರವಾಗಿ ಹಣ್ಣು ಬರುತ್ತದೆ. ಕೃಷಿ ಇಲಾಖೆಯಿಂದ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಉಚಿತವಾಗಿ ಸಸಿ ನೀಡಿ 3 ವರ್ಷ ಗೊಬ್ಬರದ ಸಲುವಾಗಿ ಸಹಾಯಧನ ನೀಡುತ್ತೇವೆ. ತೋಟಗಾರಿಕೆ ಇಲಾಖೆಯಿಂದ ಇದಕ್ಕಾಗಿ ಪ್ರತ್ಯೇಕವಾಗಿ ಸಹಾಯ ಧನ ನೀಡುತ್ತೇವೆ. ನಮ್ಮ ದಿನ ನಿತ್ಯದ ಜೀವನೋಪಾಯಕ್ಕೆ ದಿನಸಿ ಎಣ್ಣೆ ಅವಶ್ಯಕತೆಯಿದೆ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಾಳೆ ಬೆಳೆ ಮಾಡಲು ಮುಂದೆ ಬರಬೇಕು ಎಂದರು.
3ಜಿ ಆಯಿಲ್ ಪಾಮ್ ಪ್ರೈವೇಟ್ ಕಂಪನಿಯ ಏರಿಯಾ ವ್ಯವಸ್ಥಾಪಕ ಶಾಂತಪ್ಪ ರೆಡ್ಡಿ ತಾಳೆಬೆಳೆ ಹಾಗೂ ಕಂಪನಿ ಕುರಿತು ಮಾಹಿತಿ ನೀಡಿದರು. ತಾಳೆಬೆಳೆಯ ಪ್ರಗತಿಪರ ರೈತ ಯುವರಾಜ ರಾಠೋಡ ತಾಳೆ ಬೆಳೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಹಿರೇಬೇವನೂರ ಗ್ರಾಪಂ ಅಧ್ಯಕ್ಷೆ ಶೈಲಜಾ ಜಾಧವ, ಎಎಚ್‌ಒ ಆರ್. ಬಾಲಗಾಂವ, 3ಜಿಸಿಒ ಆನಂದ ಅಗರಖೇಡ, ಸಂಗಪ್ಪ ಉಪ್ಪಿನ, ಸಿದ್ದು ವಾಂಗಿ, ಪತ್ರಕರ್ತ ರಾಜಕುಮಾರ ಚಾಬುಕಸವಾರ, ಧನಸಿಂಗ ರಾಠೋಡ, ಗುರು ಕೊಪ್ಪಾ, ಸೇವಾಲಾಲ ರಾಠೋಡ, ಚನ್ನವೀರ ವಾಂಗಿ ಇತರರಿದ್ದರು.