ತಾಳಗುಂದದಲ್ಲಿ ಇನ್ನಷ್ಟು ಅವಶೇಷಗಳು ಪತ್ತೆ; ಸುಟ್ಟ ಇಟ್ಟಿಗೆ, ಮಡಕೆ ಚೂರು, ಪಾನ ಪಾತ್ರೆಗಳು ಉತ್ಖನನ

17 srl 1
Published on

ಶಿರಾಳಕೊಪ್ಪ: ಸಮೀಪದ ತಾಳಗುಂದ ಗ್ರಾಮ ಕದಂಬರ ಮೂಲನೆಲೆಯಾಗಿದ್ದು ಇಲ್ಲಿ ಈಗಾಗಲೇ ಕದಂಬರ ಅವಧಿಯ ಸಾಕಷ್ಟು ಐತಿಹಾಸಿಕ ಅವಶೇಷಗಳು ದೊರೆತಿವೆ. ಈಗ ಕದಂಬರ ಅವಧಿಯ ಸುಟ್ಟ ಇಟ್ಟಿಗೆಗಳಿಂದಾದ ರಚನೆ, ಬೃಹತ್ ಪ್ರಮಾಣದಲ್ಲಿ ಮಡಕೆ ಚೂರುಗಳು ಮತ್ತು ಹಾಳಾದ ಪಾನಪಾತ್ರೆಗಳ ಭಾಗಗಳು ಪತ್ತೆಯಾಗಿವೆ.

ಇಲ್ಲಿನ ಪ್ರಸಿದ್ಧ ಪ್ರಣವೇಶ್ವರ ದೇವಾಲಯದ ಪಕ್ಕದಲ್ಲಿರುವ ಗುಡ್ಡ ಪ್ರದೇಶದಲ್ಲಿ ಗಿಡ ನೆಡಲೆಂದು ಗುಂಡಿ ತೋಡಲಾಗಿದೆ. ಆಗ ಸುಟ್ಟ ಮಣ್ಣಿನ ಮಡಿಕೆಗಳ ಚೂರುಗಳು ಪಾನಪಾತ್ರೆಗಳು ಕಂಡು ಬಂದಿವೆ. ಇದನ್ನು ಗಮನಿಸಿದ ಪತ್ರಕರ್ತ ಎಂ.ನವೀನಕುಮಾರ್, ಇತಿಹಾಸಕಾರ ರಮೇಶ ಹಿರೇಜಂಬೂರು ಇನ್ನಷ್ಟು ಸ್ಥಳ ಪರಿಶೀಲನೆ ಮಾಡಿದಾಗ ಪ್ರಾಚೀನ ಇಟ್ಟಿಗೆಗಳಿಂದ ನಿರ್ಮಿಸಿದ ರಚನೆ ಕಂಡು ಬಂದಿದೆ. ಇದರಲ್ಲಿ ದೊರೆತ ಒಂದು ಪೂರ್ಣ ಇಟ್ಟಿಗೆಯ ಗಾತ್ರ ಉದ್ದ 43 ಸೆಂ.ಮೀ., ಅಗಲ 21 ಸೆಂ.ಮೀ. ಮತ್ತು ದಪ್ಪ 8 ಸೆಂ.ಮೀ. ಆಗಿದೆ. ಇದೇ ಗಾತ್ರದ ಇಟ್ಟಿಗೆಗಳಿಂದ ರಚಿಸಲ್ಪಟ್ಟ ಒಂದು ಕುಂಬಾರನ ಕುಲುಮೆ ಮೂರು ವರ್ಷಗಳ ಹಿಂದೆ ಪತ್ತೆಯಾಗಿತ್ತು.

ಶ್ರೀ ಪ್ರಣವೇಶ್ವರ ದೇವಾಲಯದ ಪೂರ್ವದ ಭಾಗದಲ್ಲಿರುವ ಜಮೀನನ್ನು ರೈತರೊಬ್ಬರು ಸಮತಟ್ಟು ಮಾಡುವ ಸಂದರ್ಭದಲ್ಲಿ ಮೂರು-ನಾಲ್ಕನೇ ಶತಮಾನಕ್ಕೆ ಸೇರಿದ ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟ ವೃತ್ತಾಕಾರದ ಕಟ್ಟಡ ಕಂಡು ಬಂದಿತ್ತು. ಅದರ ರಚನಾ ವಿನ್ಯಾಸವನ್ನು ಗಮನಿಸಿದಾಗ ಕೆಳಗಿನಿಂದ ಮೇಲಿನವರೆಗೆ ಒಟ್ಟು ಎಂಟು ಅಡಿಗೂ ಹೆಚ್ಚಿನ ಎತ್ತರವಿದ್ದು ಆಕಾರದ ವಿನ್ಯಾಸವನ್ನು ಹೊಂದಿತ್ತು. ಮೇಲ್ಭಾಗದಲ್ಲಿ ಸುಮಾರು ಆರು ಅಡಿ ವ್ಯಾಸ ಹೊಂದಿದ್ದು ಕೆಳಭಾಗದಲ್ಲಿ ಮೂರು ಅಡಿ ವ್ಯಾಸ ಹೊಂದಿದೆ. ರೈತರು ಜೆಸಿಬಿಯಂತ್ರ ಬಳಸಿದ್ಧರಿಂದ ಉತ್ತರ ಭಾಗದ ವೃತ್ತಾಕಾರದ ರಚನೆ ಭಗ್ನವಾಗಿದೆ. ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಡಿಕೆಯ ಚೂರುಗಳು ಕಂಡು ಬಂದಿದ್ದು ಒಂದೆರೆಡು ಹಾಳಾಗದ ಬಟ್ಟಲುಗಳು ಕಂಡು ಬಂದಿದ್ದವು.

ಈಗ ತೆರೆದಿರುವ ಇಟ್ಟಿಗೆಗಳೂ ಈ ಹಿಂದೆ ದೊರೆತಿದ್ದ ಕುಂಬಾರನ ಕುಲುಮೆ ರಚಿಸಲು ಬಳಸಿದ್ದ ಇಟ್ಟಿಗೆಗಳ ಗಾತ್ರವನ್ನೇ ಹೋಲುವುದರಿಂದ ಮತ್ತು ಈ ರಚನೆಯ ಸುತ್ತಲೂ ಹೇರಳವಾಗಿ ಪಾನ ಬಟ್ಟಲುಗಳು ಒಡೆದ ಕೆಂಪು ಬಣ್ಣದ ಮಡಿಕೆ ಚೂರುಗಳು ದೊರೆಯುದರಿಂದ ಇಲ್ಲೂ ಬೃಹತ್ ಪ್ರಮಾಣದ ಮಡಿಕೆ ಮತ್ತು ಪಾನಬಟ್ಟಲುಗಳ ತಯಾರಿಕಾ ಘಟಕ ಇದ್ದಿರಬಹುದಾದ ಸಾಧ್ಯತೆಗಳಿವೆ. ಇದೇ ರೀತಿಯ ಅವಶೇಷಗಳು ಗುಡ್ನಾಪುರದ ಉತ್ಖನನ ಕಾರ್ಯದಲ್ಲಿ ದೊರೆತಿದ್ದ ಉಲ್ಲೇಖಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net