ತಾಲೂಕು ಕೇಂದ್ರದಲ್ಲಿ ಕಚೇರಿ ಆರಂಭಿಸಿ

oplus_2
oplus_2
Published on

ಕೊಟ್ಟೂರು: ತಾಲೂಕು ರಚನೆಯಾಗಿ ಆರೇಳು ವರ್ಷ ಕಳೆದರೂ ತಾಲೂಕು ಕೇಂದ್ರದಲ್ಲಿ ಇರಬೇಕಾದ ಕಚೇರಿಗಳನ್ನು ಇನ್ನೂ ಆರಂಭಿಸದಿರುವ ಸರ್ಕಾರದ ನಡೆ ಖಂಡಿಸಿ ಪಟ್ಟಣದ ತಹಸಿಲ್ ಕಚೇರಿ ಬಳಿ ಸಿಪಿಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.

ಎಐಡಿಆರ್‌ಎಂ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಕೊಟ್ರಶ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಲಿಖಿತ ಭರವಸೆ ನೀಡಿದರೆ ಮಾತ್ರ ನಮ್ಮ ಹೋರಾಟ ಹಿಂಪಡೆಯಲಾಗುವುದು ಎಂದು ತಿಳಿಸಿದರು. .

ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ಸಂತೋಷ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ತಾರತಮ್ಯ ಮಾಡದೆ ಮೂಲ ಸೌಕರ್ಯ ಒದಗಿಸಬೇಕು. ಈ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಇತರ ವಿವಿಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐ ತಾಲೂಕು ಕಾರ್ಯದರ್ಶಿ ಕೆ.ರೇಣುಕಮ್ಮ ಮಾತನಾಡಿ, ವಿಮುಕ್ತ ದೇವದಾಸಿಯರಿಗೆ ಕಳೆದ 5 ತಿಂಗಳಿಂದ ಬಾಕಿ ಇರುವ ಮಾಸಾಶನ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.

17 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತೇರುಬಯಲು ಬಸವೇಶ್ವರ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಎಐಡಿಆರ್‌ಎಂ ತಾಲೂಕು ಅಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಎಐಟಿಯುಸಿ ಸಂಘಟನೆಯ ಉಮೇಶ, ಹಾಲಮ್ಮ, ಶಂಕ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net