ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನ

28 yelandur 01
Published on

ಯಳಂದೂರು: ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಜು.6 ರಂದು ತಾಲೂಕು ಕಚೇರಿಗೆ ಜಾನುವಾರು ಸಮೇತ ಆಗಮಿಸಿ ಮುತ್ತಿಗೆ ಹಾಕಲು ರೈತ ಸಂಘ ನಿರ್ಧರಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಳೆಇಲ್ಲದೆ ೀಗ ನೀರಿನ ಸಮಸ್ಯೆ ಉಲ್ಬಣಿಸಿದೆ. ಜಿಲ್ಲೆ ಹಾಗೂ ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಿಸಬೇಕು. 25 ವರ್ಷಗಳಿಂದಲೂ ಹಲವಾರು ಹಳ್ಳಿಗಳಲ್ಲಿ ಕರ ನಿರಾಕರಣೆ ಚಳುವಳಿ ನಡೆಯುತ್ತಿದೆ. ಹಿಂದಿನ ಹಳೆ ವಿದ್ಯುತ್ ಬಾಕಿಯನ್ನು ಸರ್ಕಾರ ಮನ್ನಾ ಮಾಡದ ಕಾರಣ ತಕ್ಷಣ ಇದನ್ನು ಮನ್ನಾ ಮಾಡಬೇಕು, ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು, ಕಬಿನಿ ಜಲಾಶಯದಲ್ಲಿ ಇರುವ ನೀರನ್ನು ಕಾಲುವೆಗೆ ಹರಿಸಿ ಕರೆಕಟ್ಟೆಗಳನ್ನು ತುಂಬಿಸಬೇಕು, ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ರೈತರ ಫಸಲು ನಷ್ಟವಾದರೆ ಬೆಳೆನಷ್ಟ ಪರಿಹಾರವನ್ನು ನೀಡಬೇಕು ಎಂದು ಆಗ್ರಗಹಿಸಿದರು.


2023-24 ನೇ ಸಾಲಿನ ಕಬ್ಬಿನ ಕಟಾವು ಹಾಗೂ ಬೆಲೆ ಸಂಬಂಧಿಸಿದ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು, ಹೊಲಗದ್ದೆಗಳಿಗೆ ಸಂಪರ್ಕಿಸುವ ರಸ್ತೆ ತಕ್ಷಣ ದುರಸ್ತಿ ಮಾಡಬೇಕು, ಆಮೆಕೆರೆ ರೈತರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು, ಬಿಳಿಗಿರಿರಂಗನಬೆಟ್ಟದ ಪೋಡುಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು, ವಿದ್ಯಾರ್ಥಿಗಳಿಗೆ ಇರುವ ಬಸ್ ಪಾಸ್‌ನ ಮಿತಿಯನ್ನು 60 ಕಿ.ಮಿ. ನಿಂದ 100 ಕಿ.ಮಿ.ಗೆ ಏರಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.


ಅಂದು ಪಟ್ಟಣದ ನಾಡಮೇಗಲಮ್ಮ ದೇಗುಲದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ರೈತರು, ರೈತ ಮಹಿಳೆಯರು ತಮ್ಮ ಜಾನುವಾರುಗಳೊಂದಿಗೆ ಮೆರವಣಿಗೆ ಮೂಲಕ ಹೊರಟು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ನಮ್ಮ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಧರಣಿಯನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ಧಲಿಂಗಸ್ವಾಮಿ, ಕಾರ್ಯದರ್ಶಿ ಶಿವಪ್ರಸಾದ್, ಹಸಿರುಸೇನೆ ಸಂಚಾಲಕ ವೃಷಭೇಂದ್ರ, ಅಂಬಳೆ ಶಿವಕುಮಾರ್, ಗೌಡಹಳ್ಳಿ ಸೋಮಣ್ಣ, ರಾಜಣ್ಣ ಸೇರಿದಂತೆ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net