ತಾಲೂಕು ಕಚೇರಿಗೆ ಡಿಸಿ ದಿಢೀರ್ ಭೇಟಿ

10-gpt-2
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಗೆ ಡಿ.ಎಸ್.ರಮೇಶ್ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ರವಿಶಂಕರ್ ಇದ್ದರು.
Published on

ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

12 ಗಂಟೆ ಸಮಯದಲ್ಲಿ ಕಚೇರಿಗೆ ಆಗಮಿಸಿದ ಡಿಸಿ ರಮೇಶ್ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆ ಕುರಿತಂತೆ ತಹಸೀಲ್ದಾರ್ ಸಿ.ಜಿ.ರವಿಶಂಕರ್ ಅವರಿಂದ ಮಾಹಿತಿ ಪಡೆದರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಮುಂದಾದರು. ಜಿಲ್ಲಾಧಿಕಾರಿಗಳಿಗೆ ಮತದಾರ ಗುರುತಿನ ಚೀಟಿ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಬೇಗೂರು ವ್ಯಾಪ್ತಿಯಲ್ಲಿ ಕ್ರಷರ್‌ಗಳಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ದೂರುಗಳು ಕೇಳಿಬಂದವು.

ಹೊರೆಯಾಲ ಮತ್ತು ಚಿಕ್ಕಾಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕ್ರಷರುಗಳ ಮಾಲೀಕರು ಅನುಪಯುಕ್ತ ಕಚ್ಚಾ ವಸ್ತುಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಅತಿಯಾದ ಭಾರ ಹೊತ್ತು ಸಾಗುವ ಲಾರಿಗಳು ವೇಗವಾಗಿ ಚಲಿಸುವುದರಿಂದ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಶ್ರೀಕಂಠರಾಜೇ ಅರಸು ಅವರಿಗೆ ಸೂಚನೆ ನೀಡಿದರು.

ಪಂಜನಹಳ್ಳಿ ಗ್ರಾಮದ ಸ್ಮಶಾನದ ಸ್ಥಳವನ್ನು ಸ್ವಚ್ಛಗೊಳಿಸುವಂತೆ, ಪಡಿತರ ಕಾರ್ಡ್, ಆಧಾರ್ ಕಾರ್ಡ್ ಸಮಸ್ಯೆ ಕೂಡಲೇ ಬಗೆಹರಿಸಲು ಕ್ರಮವಹಿಸುವಂತೆ ತಹಸೀಲ್ದಾರ್ ಅವರಿಗೆ ನಿರ್ದೇಶಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜ್, ಶಿರಸ್ತೆದಾರ್ ಮಹೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net