ತಾಲೂಕು ಕಚೇರಿ ನಿರ್ವಣಕ್ಕೆ ಅನುದಾನ ಬಿಡುಗಡೆ

15 GAJENDRAGAD 3
Published on

ಗಜೇಂದ್ರಗಡ: ಸರ್ಕಾರದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ವಿವಿಧ ತಾಲೂಕು ಮಟ್ಟದ ಕಚೇರಿಗಳ ನಿರ್ವಣಕ್ಕೆ ಮೊದಲ ಹಂತದ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ರಸ್ತೆಯ ಸಂಪ್​ಹೌಸ್ ಬಳಿ ತಹಸೀಲ್ದಾರ್ ಕಚೇರಿ, ನ್ಯಾಯಾಲಯ ಸಂಕೀರ್ಣ ಮತ್ತಿತರ ಸರ್ಕಾರಿ ಕಟ್ಟಡಗಳ ನಿರ್ವಣಕ್ಕಾಗಿ ಗುರುತಿಸಿದ ಜಾಗವನ್ನು ಜಿಲ್ಲಾಧಿಕಾರಿ ನೇತೃತ್ವದ ತಂಡದೊಂದಿಗೆ ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು. ಜನತೆಗೆ ಸಕಾಲದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರವೇ ಕಾಮಗಾರಿಗಳನ್ನು ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, 36 ಎಕರೆ 30 ಗುಂಟೆ ಜಾಗದಲ್ಲಿ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ನ್ಯಾಯಾಲಯ ಸಂಕೀರ್ಣ, ಮಿನಿಸೌಧ ಸೇರಿ ವಿವಿಧ ಕಚೇರಿಗಳ ನಿರ್ವಣಕ್ಕೆ ನೀಲನಕ್ಷೆ ಸಿದ್ಧವಾಗಿದೆ ಎಂದರು.

ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ಉಪತಹಸೀಲ್ದಾರ್ ವೀರಣ್ಣ ಅಡಗತ್ತಿ, ಭೂ ದಾಖಲೆ ಸಹಾಯಕ ನಿರ್ದೇಶಕ ಸುರೇಶ ಕಿರಗಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಎಂ.ಬಿ. ಮುದಿಬಸನಗೌಡರ, ತಾಪಂ ಇಒ ಸಂತೋಷಕುಮಾರ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಶೋಕ ವನ್ನಾಲ, ಬಿ.ಎಂ. ಸಜ್ಜನ, ಇತರರಿದ್ದರು.

ನಿಗದಿತ ಸಮಯದಲ್ಲಿ ವಹಿವಾಟು ನಡೆಸಿ

ಗಜೇಂದ್ರಗಡ: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 6ಗಂಟೆವರೆಗೆ ಪಟ್ಟಣದಲ್ಲಿ ವ್ಯಾಪಾರ-ವಹಿವಾಟು ನಡೆಸುವಂತೆ ವ್ಯಾಪಾರಸ್ಥರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕೆಲ ವ್ಯಾಪಾರಸ್ಥರು ಸ್ವಯಂ ನಿರ್ಬಂಧ ಹೇರಿಕೊಂಡು ಮಧ್ಯಾಹ್ನ 1ಗಂಟೆಗೆ ಹಾಗೂ ಕೆಲವರು ಮಧ್ಯಾಹ್ನ 2 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತದ ಆದೇಶದಂತೆ ವ್ಯಾಪಾರ-ವಹಿವಾಟು ನಡೆಸಲು ವ್ಯಾಪಾರಸ್ಥರಿಗೆ ಸೂಚಿಸುವಂತೆ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರ ಗಮನಕ್ಕೆ ತರಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net