

ಅರಸೀಕೆರೆ: ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣವೇ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಮುಖಂಡರು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಹಾಸನ ತುಮಕೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ದಶಕಗಳಿಂದಲೂ 7 ಸಾವಿರ ಎಕರೆ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುವ ಅನ್ನದಾತರ ಬದುಕು ಬೀದಿಗೆ ಬೀಳುವ ಸನ್ನಿವೇಶ ನಿರ್ಮಾಣಗೊಂಡಿದೆ. ಪರಿಸ್ಥಿತಿ ಹೀಗಿದ್ದರೂ ನಮ್ಮನ್ನಾಳುವ ಸರ್ಕಾರಗಳು ಸ್ಪಷ್ಟ ನಿಲುವು ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ವಾಸ್ತವ ಮನಗಂಡು ಅಧಿಕಾರಿಗಳು ಸಂಕಷ್ಟದಲ್ಲಿರುವ ಸಾಗುವಳಿದಾರನ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಉಪ ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಅಯೂಬ್ ಪಾಷಾ, ಕಾರ್ಯದರ್ಶಿ ದಸ್ತಗೀರ್, ಮುಖಂಡರಾದ ಸೋಮಣ್ಣ, ಸುರೇಶ್, ಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು.