

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮರ್ಪಕ ಸೇವೆ ದೊರಕದೆ ರೋಗಿಗಳು ಪರದಾಡುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯನ್ನು ಇತ್ತೀಚೆಗೆ 100 ಹಾಸಿಗೆಗಳಿಗೆ ಉನ್ನತೀಕರಿಸಲಾಗಿದೆ. ಅಲ್ಲದೆ ಇದರ ಹಿಂಭಾಗದಲ್ಲಿ 60 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆಯೂ ಇವೆ. ಸಾರ್ವಜನಿಕ ಆಸ್ಪತ್ರೆಯನ್ನು ಉನ್ನತೀಕರಿಸಿದರೂ ಅದಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ನಿಯೋಜಿಸದ ಪರಿಣಾಮ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದೆ ಪರದಾಡುತ್ತಿದ್ದಾರೆ.
ತಾಲೂಕು ಕೇಂದ್ರದಲ್ಲಿರುವ ಈ ಆಸ್ಪತ್ರೆಗೆ ಪ್ರತಿ ದಿನವೂ ಸಾವಿರಾರು ರೋಗಿಗಳು ಬರುತ್ತಿದ್ದಾರೆ. ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುವುದರಿಂದ ಪ್ರತಿ ದಿನವೂ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಗಾಯಾಳುಗಳಿಗೆ ಚಿಕಿತ್ಸೆಗಾಗಿ ಇಲ್ಲಿಗೆ ಕರೆತರಲಾಗುತ್ತಿದೆ. ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷಗಳಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗೆ ಕರತರಲಾಗುತ್ತಿದೆ. ಆದರೆ ಇಷ್ಟು ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಅಗತ್ಯವಾದ ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಅಗತ್ಯ ಸೌಲಭ್ಯಗಳ ಕೊರತೆಯಿಂದ ಗ್ರಾಮೀಣ ಪ್ರದೇಶದ ಬಡರೋಗಿಗಳು ತೊಂದರೆ ಎದುರಿಸುವಂತಾಗಿದೆ.
ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ಬಂದರೂ ರೋಗಿಗಳು ವೈದ್ಯರನ್ನು ಭೇಟಿ ಮಾಡಲು ಭಾರೀ ಸಾಹಸ ಮಾಡಬೇಕಾಗಿದೆ. ಸದಾ ಜನಗಳಿಂದ ಗಿಜಿಗುಟ್ಟುವ ಒಪಿಡಿ ಚೀಟಿ ಕೊಡುವ ಕೌಂಟರಿನಲ್ಲಿ ಕೇವಲ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸದಾ ಕಾಲವೂ ಸರ್ವರ್ ಬಿಜಿ ಮುಂತಾದ ಸಮಸ್ಯೆಗಳಿಂದ ಚೀಟಿ ಕೊಡುವುದು ತುಂಬಾ ತಡವಾಗುತ್ತಿದೆ. ಒಪಿಡಿ ಚೀಟಿ ಪಡೆದರೂ ಹನ್ನೊಂದು ಗಂಟೆಯಾದರೂ ವೈದ್ಯರು ಆಸ್ಪತ್ರೆಯತ್ತ ಸುಳಿಯದ ಪರಿಣಾಮ ವೈದ್ಯರಿಗಾಗಿ ಬಹಳ ಹೊತ್ತು ಕಾಯಬೇಕಾಗಿದೆ.
ವೈದ್ಯರ ಕೊಠಡಿಗೆ ಹೋದರೆ ಅಲ್ಲಿಯೂ ಸರದಿಯಲ್ಲಿ ನಿಂತರೋಗಿಗಳನ್ನು ನೋಡುವವರೆಗೆ ಕಾಯುತ್ತಾ ನಿಲ್ಲುವ ಜತೆಗೆ ರಕ್ತ, ಮಲಮೂತ್ರ, ಮೂಳೆ ಮುರಿತಗಳಿಗೆ ಎಕ್ಸ್‌ರೇ, ನಾನಾ ಭಾಗಗಳಲ್ಲಿನ ಸಮಸ್ಯೆಗಳ ಪತ್ತೆಗೆ ಸ್ಕ್ಯಾನಿಂಗ್ ಅಥವಾ ಇನ್ನಾವುದೇ ಪರೀಕ್ಷೆಗಳಿಗೆ ಶಿಫಾರಸ್ಸು ಮಾಡಿದರೆ ಇಡೀ ದಿನ ಮುಗಿದೇ ಹೋಗುತ್ತಿದೆ. ಪರೀಕ್ಷೆಗೆ ಅಗತ್ಯವಾದ ಹಣವನ್ನು ಕೌಂಟರಿನಲ್ಲಿ ಕಟ್ಟಿ ಚೀಟಿ ಪಡೆದುಕೊಳ್ಳುವವರೆಗೆ ಮಧ್ಯಾಹ್ನವಾಗುವುದರಿಂದ 3 ಗಂಟೆವರೆಗೆ ಬಾಗಿಲು ಮುಚ್ಚಲಾಗುತ್ತದೆ. ಮಧ್ಯಾಹ್ನದ ನಂತರ ವಿದ್ಯುತ್ ಕೈಕೊಟ್ಟರಂತೂ ಯಾವುದೇ ಪರೀಕ್ಷೆಗಳನ್ನು ಮಾಡಿಸಲು ಆಗದೆ ದುಬಾರಿ ಬೆಲೆ ತೆತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತಾಗಿದೆ.
ಅಲ್ಲದೆ ವೈದ್ಯರು ಬರೆದುಕೊಟ್ಟ ಬಹುತೇಕ ಔಷಧಿಗಳು ಆಸ್ಪತ್ರೆಯಲ್ಲಿ ಸಂಗ್ರಹವಿಲ್ಲ. ಅಲ್ಲದೆ ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಮಳಿಗೆಯಲ್ಲಿ ರೋಗಿಗಳಿಗೆ ಅಗತ್ಯವಾದ ಯಾವುದೇ ಔಷಧಿಗಳು ದೊರಕದ ಪರಿಣಾಮ ಹೊರಗಿನ ಔಷಧಿ ಅಂಗಡಿಗಳಲ್ಲಿ ದುಬಾರಿ ಬೆಲೆ ತೆತ್ತು ಖರೀದಿಸಬೇಕಾಗಿದೆ. ರಾತ್ರಿ ಪಾಳಿಯಲ್ಲಿ ಒಬ್ಬರೇ ವೈದ್ಯರು ಕರ್ತವ್ಯ ನಿರ್ವಹಿಸುವುದರಿಂದ ಅಪಘಾತ ಹೆರಿಗೆ ಮುಂತಾದ ತುರ್ತು ಚಿಕಿತ್ಸೆಗಳನ್ನು ನೀಡಲು ಸಾಧ್ಯವಾಗದೆ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕಳಿಸಲಾಗುತ್ತಿದೆ.
ಸಮರ್ಪಕ ಸಿಬ್ಬಂದಿಗಳ ನೇಮಕ ಮಾಡದ ಪರಿಣಾಮ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ತಾಯಿ ಮಕ್ಕಳ ಆಸ್ಪತ್ರೆಯು ಕೇವಲ ಮಕ್ಕಳಿಗೆ ವ್ಯಾಕ್ಸಿನ್ ಕೊಡಲು ಮಾತ್ರ ಬಳಕೆಯಾಗುತ್ತಿದೆ. ಆದ್ದರಿಂದ ಇನ್ನಾದರೂ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ವೈದ್ಯಕೀಯ ಸೇವೆ ದೊರಕುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.