ತಾಲೂಕು ಆಸ್ಪತ್ರೆಗೆ ಹಲವು ಸೌಲಭ್ಯ

nrp mla
ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ರಕ್ಷಾ ಸಮಿತಿ ಸಭೆ ನಡೆಯಿತು. ಎಲಿಯಾಸ್, ಅಭಿಲಾಷ್, ರಥನ್ ಗೌಡ, ರೇವಂತ್, ಸುನೀಲ್‌ಕುಮಾರ್, ಸುಜಿತ್, ಎಸ್.ಡಿ.ರಾಜೇಂದ್ರ, ಇ.ಸಿ.ಜೋಯಿ, ಪಿ.ಆರ್.ಸದಾಶಿವ, ರಘು ಇದ್ದರು.
Published on

ಎನ್.ಆರ್.ಪುರ: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಸುಸಜ್ಜಿತ ಶವಾಗಾರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ಷಾ ಸಮಿತಿ ಸಭೆಯಲ್ಲಿ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಕೆ.ಒ.ನರಸಿಂಹಮೂರ್ತಿ ಮಾತನಾಡಿ, ಈಗಿರುವ ಶವಾಗಾರದಲ್ಲಿ ಕೇವಲ ಒಂದು ಶವ ಇರಿಸಲು ಸಾಧ್ಯ. ಏಕ ಕಾಲದಲ್ಲಿ ಎರಡ್ಮೂರು ಶವಗಳ ಪರೀಕ್ಷೆ ನಡೆಸಬೇಕಾದಂತಹ ಸಂದರ್ಭ ಬಂದಾಗ ಉಳಿದ ಶವಗಳನ್ನು ಇಡಲು ಸ್ಥಳವಿಲ್ಲದಂತಾಗಿದೆ ಎಂದು ಸಭೆಯ ಗಮನಕ್ಕೆ ತಂದಾಗ ಶಾಸಕ ಪ್ರತಿಕ್ರಿಯಿಸಿದರು.

ಈ ಬಾರಿ ಒಂದಕ್ಕಿಂತ ಹೆಚ್ಚು ಶವಗಳನ್ನು ಇಡಲು ಸ್ಥಳಾವಕಾಶ ಇರುವಂತೆ ಕಟ್ಟಡ ನಿರ್ಮಾಣ ಮಾಡಲಾಗುವುದು. ಹೊಸ ತಾಲೂಕು ಪ್ರಯೋಗಾಲಯ ಕಟ್ಟಡ ಉದ್ಘಾಟನೆಗೆ ಸಂಸದರಿಗೆ ಮೂರ್ನಾಲ್ಕು ಬಾರಿ ದಿನಾಂಕ ನಿಗದಿಪಡಿಸಿಕೊಡುವಂತೆ ಕೋರಿದರೂ ನೀಡಲಿಲ್ಲ. ರೋಗಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಕಾರ್ಯಾರಂಭ ಮಾಡಲಾಗಿದೆ. ಅಧಿಕತ ಉದ್ಘಾಟನೆ ಬಾಕಿ ಇದೆ ಎಂದು ಶಾಸಕರು ತಿಳಿಸಿದರು.

ಹೊಸ ಪ್ರಯೋಗಾಲಯದ ಕಟ್ಟಡ ಕಿಟಕಿ ಸ್ಲ್ತ್ರ್ಯಾಬ್ ಮತ್ತು ಗೋಡೆ ಸೋರುತ್ತಿರುವುದರಿಂದ ಗುತ್ತಿಗೆದಾರನಿಗೆ ಬಿಲ್ ತಡೆ ಹಿಡಿದು, ಆರ್‌ಸಿಸಿ ಮೇಲೆ ಶೀಟ್ ಅಳವಡಿಸಲು ಸೂಚಿಸಿ ಎಂದು ಡಾ. ಕೆ.ಒ.ನರಸಿಂಹಮೂರ್ತಿ ಅವರಿಗೆ ಶಾಸಕರು ಸೂಚಿಸಿದರು.

ರಾಜ್ಯ ನಿಧಿಯಿಂದ ಇಂಧನ ವೆಚ್ಚ ಭರಿಸಲು ಅನುದಾನ ತಡವಾಗಿ ಬಿಡುಗಡೆಯಾಗುತ್ತದೆ. ಆದ್ದರಿಂದ ರಕ್ಷಾ ಸಮಿತಿಯ ಬಳಕೆದಾರರ ನಿಧಿಯಿಂದ ಇಂಧನ ವೆಚ್ಚ ಭರಿಸಿ, ನಂತರ ಬಿಡುಗಡೆಯಾಗುವ ಅನುದಾನ ಹೊಂದಾಣಿಕೆ ಮಾಡಿಕೊಳ್ಳಲು ಅನುಮತಿ ಕೋರಿದರು.

ಮುತ್ತಿನಕೊಪ್ಪ ಗ್ರಾಪಂ ಸದಸ್ಯ ರೇವಂತ್ ಮಾತನಾಡಿ, ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡರೆ ಆಟೋಮೆಟಿಕ್ ಆಗಿ ಜನರೇಟರ್ ಆನ್ ಆಗುವುದಿಲ್ಲ. ಸಿಬ್ಬಂದಿ ಹೋಗಿ ಆನ್ ಮಾಡುವಷ್ಟರಲ್ಲಿ ತಡವಾಗುತ್ತದೆ. ಆದ್ದರಿಂದ ಕೂಡಲೇ ಆಟೋಮೆಟಿಕ್ ಸ್ಟಾರ್ಟರ್ ಅಳವಡಿಸುವಂತೆ ತಿಳಿಸಿದರು. ಆಸ್ಪತ್ರೆ ಅಧಿಕಾರಿಗಳು, ಸಿಬ್ಬಂದಿ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ರಕ್ಷಾ ಸಮಿತಿ ಸದಸ್ಯರು ದೂರಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ತಿಂಗಳಿಗೊಮ್ಮೆ ನನ್ನ ಅನುಪಸ್ಥಿತಿಯಲ್ಲೂ ಸಮಿತಿ ಸದಸ್ಯರನ್ನು ಕರೆಸಿ, ಆಸ್ಪತ್ರೆ ವ್ಯವಸ್ಥೆ ಕುರಿತು ಚರ್ಚಿಸಿ ಎಂದು ಡಾ. ಕೆ.ಒ.ನರಸಿಂಹಮೂರ್ತಿ ಅವರಿಗೆ ಸೂಚಿಸಿದರು.

ಸಮಿತಿ ಸದಸ್ಯ ಸುಜಿತ್ ಮಾತನಾಡಿ, ಆಸ್ಪತ್ರೆ ಆವರಣದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಆಂಬುಲೆನ್ಸ್‌ಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಯಾವುದಾದರೊಂದು ಅನುದಾನದಿಂದ ಆಸ್ಪತ್ರೆಗೆ ವಾಚ್‌ಮ್ಯಾನ್ ನೇಮಕ ಮಾಡಿಕೊಂಡರೆ ಸೂಕ್ತ ಎಂದು ಸಲಹೆ ನೀಡಿದರು.

ಪ್ರಸೂತಿ ತಜ್ಞೆ 45 ದಿನಗಳ ಕಾಲ ರಜೆ ಹಾಕಿ ಹೋಗಿದ್ದಾರೆ. ಅವರು ಪರೀಕ್ಷಿಸುತ್ತಿದ್ದ ಗರ್ಭಿಣಿಯರ ಹೆರಿಗೆ ಸಮಯ ಬಂದು, ಆಸ್ಪತ್ರೆಗೆ ಬಂದರೆ ಪ್ರಸೂತಿ ತಜ್ಞರಿಲ್ಲ ಎಂದು ಬೇರೆ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದಾರೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ರಥನ್ ಗೌಡ ಅರಗಿ ದೂರಿದರು. ಡಾ. ಕೆ.ಒ.ನರಸಿಂಹಮೂರ್ತಿ ಮಾತನಾಡಿ, ಪ್ರಸೂತಿ ತಜ್ಞರು ಆರೋಗ್ಯ ಸರಿ ಇಲ್ಲದ ಕಾರಣ ರಜೆ ಮೇಲೆ ಮೇಲಾಧಿಕಾರಿಗಳ ಅನುಮತಿ ಪಡೆದು ತೆರಳಿದ್ದಾರೆ. ಅವರ ಗೈರಿನಲ್ಲೂ ಹೆರಿಗೆ ಪ್ರಕರಣಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಶಿಾರಸು ಮಾಡಿದ್ದೇವೆಯೇ ವಿನಃ ಖಾಸಗಿ ಆಸ್ಪತ್ರೆಗೆ ಶಿಾರಸು ಮಾಡಿಲ್ಲ ಎಂದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವೈದ್ಯರಿಗೆ ಅನಾರೋಗ್ಯವಿದ್ದಾಗಲೂ ಬಂದು ಕರ್ತವ್ಯ ನಿರ್ವಹಿಸಿ ಎನ್ನುವುದು ಸರಿಯಲ್ಲ. ಅವರ ಗೈರಿನಲ್ಲಿ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗೇ ಶಿಾರಸು ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸ್ವಯಂ ಇಚ್ಛಿಸಿದವರಿಗೆ ಮಾತ್ರ ಶಿಾರಸು ಮಾಡಿ ಎಂದು ಎಲ್ಲ ವೈದ್ಯರಿಗೂ ತಿಳಿಸಿದರು.

ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡುವ 4 ಹುದ್ದೆಗಳು ಖಾಲಿ ಇವೆ ಎಂದು ಡಾ. ನರಸಿಂಹಮೂರ್ತಿ ಸಭೆಗೆ ತಿಳಿಸಿದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ವೈದ್ಯರ ಹುದ್ದೆ ದೊರಕಿದ ಕೂಡಲೇ ಸರ್ಕಾರದ ಆದೇಶದಂತೆ ಗ್ರಾಮೀಣ ಭಾಗದಲ್ಲಿ ಸೇವೆ ಮಾಡಬೇಕು. ಆದರೆ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಬರುವ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಂಡ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ದೀರ್ಘ ರಜೆ ಮೇಲೆ ತೆರಳುತ್ತಾರೆ. ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದರಿಂದ ಅವರ ಹುದ್ದೆ ಭರ್ತಿಯೆಂದೇ ತೋರಿಸುತ್ತದೆ. ಹುದ್ದೆ ಆಡಳಿತಾತ್ಮಕವಾಗಿ ಖಾಲಿ ಆಗುವುದಿಲ್ಲ. ಇದೂ ದೊಡ್ಡ ಸಮಸ್ಯೆ ಆಗಿದೆ. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net