ತಾಲೂಕು ಆಸ್ಪತ್ರೆಗಳಲ್ಲಿ ಸಿಗಲಿದೆ ತಜ್ಞರ ಸೇವೆ

kpp dinesh gundurao
ಕೊಪ್ಪದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಸಾರ್ವಜನಿಕ ಆರೋಗ್ಯ ಪ್ರಯೋಗಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು. ಕೆ.ಜೆ.ಜಾರ್ಜ್ ಮಲ್ಲಿಕಾ, ಡಾ. ಅಶ್ವತ್ಥ್ ಬಾಬು, ಕೀರ್ತನಾ ಇತರರಿದ್ದರು.
Published on

ಕೊಪ್ಪ: ರಾಜ್ಯದ ತಾಲೂಕು ಆಸ್ಪತ್ರೆಗಳಿಗೆ ಇಬ್ಬರು ಸ್ತ್ರೀರೋಗ ತಜ್ಞರು, ಇಬ್ಬರು ಮಕ್ಕಳ ತಜ್ಞರು, ಇಬ್ಬರು ಅರಿವಳಿಕೆ ತಜ್ಞರು, ಒಬ್ಬರು ರೆಡಿಯಾಲಾಜಿಸ್ಟ್ ಕಡ್ಡಾಯವಾಗಿ ನೇಮಕ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ತಾಯಿ ಮತ್ತು ಮಗುವಿನ ಆರೋಗ್ಯ ವಿಷಯಕ್ಕೆ ಆದ್ಯತೆ ಕೊಟ್ಟಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಪಟ್ಟಣದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಸಾರ್ವಜನಿಕ ಆರೋಗ್ಯ ಪ್ರಯೋಗಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಯನ್ನು ಕೇವಲ ಮೂರು ತಿಂಗಳಲ್ಲಿ ಅನುಷ್ಠಾನಕ್ಕೆ ತಂದರು. ಸರ್ಕಾರ ನುಡಿದಂತೆ ನಡೆದಿದೆ. ದೇಶದ ಜನರಿಗೆ ಅಚ್ಚರಿಯಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇದೆ. ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಆತ್ಮ ಗೌರವ ಸಿಕ್ಕಿದೆ ಎಂದು ತಿಳಿಸಿದರು.

ಶೃಂಗೇರಿಗೆ 100 ಹಾಸಿಗೆಗಳ ಆಸ್ಪತ್ರೆ ಮಂಜೂರು ಮಾಡಿಕೊಟ್ಟು, ಶೃಂಗೇರಿ ಋಣ ತೀರಿಸುವ ಕೆಲಸ ಮಾಡಿದ್ದೇವೆ. ಇನ್ನು 6-7 ತಿಂಗಳಲ್ಲಿ ಕಟ್ಟಡ ಕೆಲಸ ನಡೆಯಬೇಕು. ನಮ್ಮ ಸರ್ಕಾರದ ಅವಧಿಯಲ್ಲಿಯೇ ಉದ್ಘಾಟನೆಯಾಗಬೇಕು. ವಿಪಕ್ಷದವರು ವಿಷಯಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ವಾಲ್ಮೀಕಿ ಜಯಂತಿ ಆಚರಣೆ ಸಂಭ್ರಮದಲ್ಲಿದ್ದೇವೆ. ರಾಮಾಯಣವು ಭಾರತದ ಬೆಳವಣಿಗೆಗೆ ಸ್ಫೂರ್ತಿ. ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಕಳಂಕ ತರಲು ಹೊರಟಿರುವ ವಿಪಕ್ಷದವರ ಕೆಲಸ ಫಲಿಸಲ್ಲ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗೆ 60 ಸಾವಿರ ಕೋಟಿ ಕೊಟ್ಟರೂ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ. 14.69 ಕೋಟಿ ವೆಚ್ಚದಲ್ಲಿ ಇಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದೆ. ಆಸ್ಪತ್ರೆ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ಸಚಿವರನ್ನು ಕೇಳಿದ ಕೂಡಲೇ 1.34 ಕೋಟಿ ಮಂಜೂರು ಮಾಡಿದ್ದಾರೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಶಾಸಕ ಟಿ.ಡಿ.ರಾಜೇಗೌಡ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಲೋಕಾಯುಕ್ತ ಕೇಸ್ ಹಾಕಿಸಿದ್ದಾರೆ. ಅವರ ಮೇಲಿನ ಆರೋಪ ಆಧಾರರಹಿತ ಎಂದಾಗಿತ್ತು. ಆದರೆ ಮತ್ತೆ ಪ್ರಕರಣ ದಾಖಲಿಸಿದ್ದಾರೆ. ಅವರು ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರಬಹುದಿತ್ತು. ಹಾಗೆ ಮಾಡಿದರೆ ಕ್ಷೇತ್ರದ ಜನರು ತಪ್ಪಾಗಿ ಭಾವಿಸುತ್ತಾರೆ ಎಂದು ಅವರು ಲೋಕಾಯುಕ್ತ ಅಥವಾ ಯಾವುದೇ ತನಿಖೆ ಎದುರಿಸಲೂ ಸಿದ್ಧರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ವಾಲ್ಮೀಕಿ ಬರೆದ ರಾಮಾಯಣ ಇಡೀ ಪ್ರಪಂಚ ಹೊಗಳುತ್ತದೆ. ಅಯೋಧ್ಯೆ ರಾಮ ಅಧಿಕಾರಕ್ಕಾಗಿ ಬಳಸಲಿಲ್ಲ. ಕೊಟ್ಟ ಮಾತು ಪಾಲಿಸಲು ಅಧಿಕಾರ ತ್ಯಾಗ ಮಾಡಿದ. ರಾಮಾಯಣ ಹಿಂದುಗಳಿಗೆ ಮಾತ್ರವಲ್ಲ, ಎಲ್ಲ ಧರ್ಮದವರಿಗೂ ದಾರಿದೀಪವಾಗಿದೆ ಎಂದರು.

ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ವಾಲ್ಮೀಕಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಎಡಿಸಿ ನಾರಾಯಣ ಕನಕರಡ್ಡಿ, ಎಸಿ ಸುದರ್ಶನ್, ಆರೋಗ್ಯ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕಿ ಮಲ್ಲಿಕಾ, ಡಿಎಚ್‌ಒ ಡಾ. ಅಶ್ವತ್ಥ್ ಬಾಬು, ತಹಸೀಲ್ದಾರ್ ಲಿಖಿತಾ ಮೋಹನ್, ಪಪಂ ಅಧ್ಯಕ್ಷೆ ಎಚ್.ಆರ್.ರೇಖಾ, ಡಾ. ಸಂದೀಪ್, ಸುಧಾಕರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಬಗರ್ ಹುಕುಂ ಸಮಿತಿ ಸದಸ್ಯರು, ಕೆಡಿಪಿ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net