

ಹಗರಿಬೊಮ್ಮನಹಳ್ಳಿ: ನೂತನ ತಾಲೂಕು ಆಡಳಿತಸೌಧಕ್ಕೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಟ್ಟಣ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸಿಟಿ ಬಸ್ ಸೇವೆ ಆರಂಭಿಸಲಾಗಿದೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ಗಾಳೆಮ್ಮ ದೇಗುಲದಿಂದ ಆಡಳಿತ ಸೌಧವರೆಗೆ ಸಾರಿಗೆ ಇಲಾಖೆಯಿಂದ ಏರ್ಪಡಿಸಿದ್ದ ಸಿಟಿ ಬಸ್ ಸೇವೆ ಆರಂಭಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಜನರಿಗೆ ತ್ವರಿತ ಸೇವೆ ನೀಡಲು ತಾಲೂಕು ಆಡಳಿತ ಕಾರ್ಯಾರಂಭವಾಗಿದೆ.
ಪಟ್ಟಣದಿಂದ 2.5 ಕಿ.ಮೀ ದೂರದಲ್ಲಿರುವ ಆಡಳಿತ ಸೌಧಕ್ಕೆ ಓಡಾಡಲು ಆಗುತ್ತಿದ್ದ ತೊಂದರೆ ಅರಿತು ಸಿಟಿ ಬಸ್ ಸೇವೆ ಆರಂಭಿಸಲಾಗಿದೆ. ಪಟ್ಟಣದ ಹೊಸಪೇಟೆ ರಸ್ತೆಯ ಗಾಳೆಮ್ಮ ದೇಗುಲದಿಂದ ರಾಮನಗರ ಬಸ್ ನಿಲ್ದಾಣ ಮಾರ್ಗವಾಗಿ, ಕೂಡ್ಲಿಗಿ ವೃತ್ತ, ನೇತಾಜಿ ರಸ್ತೆ ಮೂಲಕ ಬಸವೇಶ್ವರ ರಸ್ತೆ, ಕೋರ್ಟ್ ಮುಂಭಾಗದಿಂದ ಆಡಳಿತ ಸೌಧಕ್ಕೆ ಸಿಟಿ ಬಸ್ ದಿನ ನಿತ್ಯ ಸಂಚರಿಸಲಿದೆ.
ಪ್ರಯಾಣಿಕರಿಗೆ ಕೇವಲ 10 ರೂ. ಟಿಕೆಟ್ ದರದಲ್ಲಿ ಸೇವೆ ಸಿಗಲಿದೆ. ತಾಲೂಕಿನ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಪ್ರಕಾಶ್ ಚಿತ್ತವಾಡ್ಗಿ, ರಾಜು ಪಾಟೀಲ್, ಸಿದ್ದರಾಜು, ಬಡಿಗೇರ್ ಬಸವರಾಜ್, ಐನಳ್ಳಿ ಶೇಖರ್, ಬಾಬುವಲಿ, ಗಜೇಂದ್ರ, ದಾದಮ್ಮನವರ ವಿಜಯ, ರಾಹುಲ್, ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ, ಬಿಇಒ ಮೈಲೇಶ್ ಬೇವೂರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಂಜನೇಯ ಹುಲ್ಲಾಳ್, ಸಾರಿಗೆ ಡಿಪೋ ವ್ಯವಸ್ಥಾಪಕಿ ಗುರುಬಸಮ್ಮ ಇತರರಿದ್ದರು.