

ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ವಿವಿಧ ದೇಗುಲಗಳಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವಲಿಂಗಕ್ಕೆ ಅಭಿಷೇಕ, ಅಲಂಕಾರ ಹಾಗು ವಿಶೇಷ ಪೂಜಾ ಕೈಂಕರ್ಯಗಳು ಶನಿವಾರ ಬೆಳಗ್ಗೆ ಸುಮಾರಿನಿಂದಲೇ ನಡೆದವು.
ಮುಂಜಾನೆಯೇ ದೇಗುಲಗಳಿಗೆ ಹೂವಿನ ಚಪ್ಪರ ಹಾಕಲಾಗಿದ್ದು ಮಹಿಳೆಯರು ನೀರಾಯಿಸಿ ರಂಗೋಲಿ ಬಿಡಿಸಿದರು. ಬಾಳೆ ಕಂದುಗಳನ್ನು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿ ಹಣ್ಣು-ಕಾಯಿ ಸಲ್ಲಸಿ ಪೂಜೆಯಲ್ಲಿ ಪಾಲ್ಗೊಂಡರು.
ಪಟ್ಟಣದ ಶ್ರೀ ಸೋಮೇಶ್ವರ ದೇಗುಲ, ದೊಡ್ಡ ಕರಡೇವು ಶ್ರೀ ಶಿವ ದೇವಾಲಯ, ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ, ಮಟ್ಟನವಿಲೆ ಶ್ರೀ ಸೋಮೇಶ್ವರ, ದಿಡಗ ಗ್ರಾಮದ ಬಾಣೇಶ್ವರ ಮತ್ತು ಬಿಲ್ಲೇಶ್ವರ, ನಾಗರನವಿಲೆಯ ಶ್ರೀ ನಾಗೇಶ್ವರ, ಸಾಸಲು ಶ್ರೀ ಶಂಭುಲಿಂಗೇಶ್ವರಸ್ವಾಮಿ, ಜಂಬೂರು ಶ್ರೀ ಜಕ್ಕೇಶ್ವರಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಶ್ರೀ ಶಿವಪುತ್ರನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಬಸವೇಶ್ವರಸ್ವಾಮಿಗೆ ಪೂಜಾ ಕೈಂಕರ್ಯಗಳು ಜರುಗಿದ್ದು ರಾಜಾಪುರ ಗೇಟ್ ಬಳಿಯಿರುವ ಶ್ರೀ ಸಾಯಿಬಾಬ ಮಂದಿರದಲ್ಲಿ ಶ್ರೀ ಗುರುಮೂರ್ತಿ ಗುರೂಜಿಯವರು ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನ ಹಿರೀಸಾವೆ ಹೋಬಳಿ ದಿಡಗ ಹಳೆ ಗ್ರಾಮದ ಕೆರೆ ಕೋಡಿಯಲ್ಲಿ ಸಿಥಿಲಗೊಂಡಿರುವ 1250 ವರ್ಷಗಳ ಐತಿಹಾಸಿಕವಾದ ಹೊಯ್ಸಳರ ಕಾಲದ ಶ್ರೀ ಬಿಲ್ಲೇಶ್ವರ ದೇಗುಲದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಗ್ರಾಮದ ಯುವಕರು ತೆರವುಗೊಳಿಸಿ ಸ್ವಚ್ಚಗೊಳಿಸಿದ್ದು ಮಹಾ ಶಿವರಾತ್ರಿ ಹಬ್ಬವನ್ನು ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದ್ದು ವಿಶೇಷವಾಗಿತ್ತು.
ಪಿ.ಹೊಸಹಳ್ಳಿ ಶ್ರೀ ಮಲ್ಲೇಶ್ವರಸ್ವಾಮಿ, ಕಾಮನಘಟ್ಟದ ಶ್ರೀ ಕಲ್ಲೇಶ್ವರಸ್ವಾಮಿ, ಉಳ್ಳಾವಳ್ಳಿ ಶ್ರೀ ಈಶ್ವರ, ಮಾದಲಗೆರೆ ಮಾದೇಶ್ವರಸ್ವಾಮಿ, ಹಿರೀಸಾವೆ ಈಶ್ವರ, ನವಿಲೆ ಶ್ರೀ ನಾಗೇಶ್ವರಸ್ವಾಮಿ ಸೇರಿದಂತೆ ತಾಲೂಕಿನ ಬಹುತೇಕ ದೇಗುಲಗಳಲ್ಲಿ ಶನಿವಾರ ರಾತ್ರಿ ಜಾಗರಣೆಯೊಂದಿಗೆ ಪೂಜಾ ಕೈಂಕರ್ಯಗಳು ಮುಂದುವರಿಯಲಿವೆ.