

ಹಾಸನ: ಕಳೆದ ಹದಿನೈದು ದಿನಗಳಿಂದ ತಾಲೂಕಿನ ಪುರದಮ ದೇವಾಲಯಲ್ಲಿ ನೀರಿಲ್ಲದೆ ಭಕ್ತರು ಪರದಾಡುವಂತಾಗಿದೆ.
ಐತಿಹಾಸಕ ಪುರದಮ ದೇವಿಗೆ ಲಕ್ಷಾಂತರ ಭಕ್ತರಿದ್ದು ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ನಿತ್ಯವೂ ಆಗಮಿಸುವ ಭಕ್ತರು ಕೈ, ಕಾಲು ತೊಳೆದುಕೊಳ್ಳಲು, ಮಾಂಸಾಹಾರ ತಯಾರಿಸಲು, ಆಹಾರ ಸೇವಿಸಲು ಹಾಗು ಸ್ವಚ್ಛತಾ ಕಾರ್ಯಕ್ಕೆ ಸಾವಿರಾರು ಲೀಟರ್ ನೀರಿನ ಅಗತ್ಯವಿದೆ. ಅದಕ್ಕಾಗಿ ಮುಜರಾಯಿ ಇಲಾಖೆ ಒಂದು ಬೋರ್‌ವೆಲ್ ಸೌಲಭ್ಯವನ್ನೂ ಕಲ್ಪಿಸಿದೆ. ಆದರೆ ಹದಿನೈದು ದಿನಗಳಿಂದ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಟ್ರಾನ್ಸ್ ಫಾರ್ಮರ್ ಸುಟ್ಟಿರುವುದರಿಂದ ಸಮಸ್ಯೆಯಾಗಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಅದರ ಅರಿವಿಲ್ಲದೇ ಆಗಮಿಸುವ ಭಕ್ತರು ನೀರಿಲ್ಲದೇ ಪರದಾಡುತ್ತಿದ್ದಾರೆ.
ಅದರಿಂದ ಟ್ಯಾಂಕರ್ ನೀರು ಸರಬರಾಜುದಾರರಿಗೆ, ಕುಡಿಯುವ ನೀರಿನ ಕ್ಯಾನ್ ಮಾರಾಟಗಾರರಿಗೆ ಬೇಡಿಕೆ ಬಂದಿದ್ದು, ದುಪ್ಪಟ್ಟು ಹಣ ನೀಡಿ ನೀರು ಖರೀದಿಸುವ ಅನಿವಾರ್ಯತೆ ಬಂದೊದಗಿದೆ. ನೀರಿನ ಕೊರತೆಯಿಂದಾಗಿ ಸ್ವಚ್ಛತೆ ಸಮಸ್ಯೆಯೂ ತಲೆದೋರಿದೆ. ಭಕ್ತರ ಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಪುರದಮ ದೇವಾಲಯಕ್ಕೆ ಭಾನುವಾರ ಹಾಗು ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಮಾಂಸಾಹಾರ ತಯಾರಿಕೆಯೂ ಇಲ್ಲಿಯೇ ಆಗುವುದರಿಂದ ನೀರಿನ ಅವಶ್ಯಕತೆ ಹೆಚ್ಚಿದೆ. ಸುಸಜ್ಜಿತ ಟ್ಯಾಂಕ್ ಒಂದನ್ನು ನಿರ್ಮಿಸಿದ್ದು ದೇವಿ ದರ್ಶನಕ್ಕೆ ಬರುವ ಭಕ್ತರು ಕೈ ಕಾಲು ತೊಳೆದು ದೇಗುಲದತ್ತ ತೆರಳುತ್ತಾರೆ. ಇನ್ನು ಅಕ್ಕಪಕ್ಕದಲ್ಲಿರುವ ಅಂಗಡಿಯವರು ಇದೇ ನೀರನ್ನು ಅವಲಂಬಿಸಿದ್ದಾರೆ. ಆದರೆ ಹದಿನೈದು ದಿನಗಳಿಂದ ನೀರಿಲ್ಲದೆ ಪರಿತಪಿಸುವಂತಾಗಿದೆ.