ತಾಲೂಕಿಗೊಂಡು ಮುಕ್ತ ವಿವಿ ಕಲಿಕಾ ಕೇಂದ್ರ

Published on

ಹಾಸನ: ತಾಲೂಕಿಗೊಂದರಂತೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕಲಿಕಾರ್ಥಿ ಸಹಾಯಕ ಕೇಂದ್ರ ತೆರೆದು ಗ್ರಾಮೀಣ ಪ್ರದೇಶದ ಜನರಿಗೆ ಉನ್ನತ ಶಿಕ್ಷಣ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಮುಕ್ತ ವಿವಿ ಹಾಸನ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ. ಜಗದೀಶ ತಿಳಿಸಿದರು.
ನಗರದ ಹೊರವಲಯ ಎಸ್.ಎಂ. ಕೃಷ್ಣನಗರದಲ್ಲಿರುವ ಮುಕ್ತ ವಿವಿ ಪ್ರಾದೇಶಿಕ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಈ ಬಾರಿ ಹಾಸನ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ಕನಿಷ್ಠ 3000 ವಿದ್ಯಾರ್ಥಿಗಳಿಗೆ ವಿವಿಧ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕರಪತ್ರಗಳ ಮೂಲಕ ಪ್ರಚಾರ ನಡೆಸಲಾಗುತ್ತಿದೆ ಎಂದರು.
ಮುಕ್ತ ವಿವಿ 2022-23 ನೇ ಸಾಲಿನ ಪ್ರವೇಶಾತಿ ಪ್ರಾರಂಭಿಸಿದ್ದು, ಪ್ರವೇಶಾತಿಯು ವರ್ಷದಲ್ಲಿ ಜನವರಿ ಮತ್ತು ಜುಲೈ ಎರಡು ಆವೃತ್ತಿಯಲ್ಲಿ ವರ್ಷಪೂರ್ತಿ(24*7) ಆನ್‌ಲೈನ್ ಮೂಲಕ ಪ್ರವೇಶಾತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಸಂಪೂರ್ಣ ಡಿಜಿಟಲೀಕರಣ.
ವಿವಿಯ ಎಲ್ಲ ಕಾರ್ಯ ಚಟುವಟಿಕೆಗಳು ಸಂಪೂರ್ಣ ಡಿಜಿಟಲೀಕರಣವಾಗಿದ್ದು, ಪ್ರವೇಶಾತಿ, ಪರೀಕ್ಷೆ ಮತ್ತು ಇನ್ನಿತರ ಶುಲ್ಕಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣಕ್ರಮಗಳು, ಪದವಿ ಆಧಾರಿತ ಒಂದು ವರ್ಷದ ಪಿಜಿ ಶಿಕ್ಷಣ ಕಾರ್ಯಕ್ರಮಗಳು, 10+2 ಆಧಾರಿತ ಒಂದು ವರ್ಷದ ಡಿಪ್ಲೊಮಾ ಶಿಕ್ಷಣ ಕಾರ್ಯಕ್ರಮಗಳು, ಆರು ತಿಂಗಳ ಅವಧಿಯ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳು ಯುಜಿಸಿ ನಿಯಮಾನುಸಾರ ನಡೆಸುತ್ತಿವೆ. ಯುಜಿಸಿ ನಿಯಮದಂತೆ ವಿದ್ಯಾರ್ಥಿಗಳು ದ್ವಿ-ಪದವಿಯನ್ನು (ಎರಡು ಡಿಗ್ರಿ) ಪಡೆಯಲು ಅವಕಾಶವಿರುತ್ತದೆ. ಶಿಕ್ಷಣ ವಂಚಿತರು ತಮ್ಮ ಅಪೇಕ್ಷೆಯಂತೆ ಇದರ ಪ್ರಯೋಜನ ಪಡೆಯಬಹುದು ಎಂದು ವಿವರ ನೀಡಿದರು.

ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಶೈಕ್ಷಣಿಕ ಕೋರ್ಸ್‌ಗಳನ್ನು ಒಂದು ಭೌತಿಕ ಕ್ರಮದಲ್ಲಿ, ಮತ್ತೊಂದು ದೂರ ಶಿಕ್ಷಣ ಕ್ರಮದಲ್ಲಿ ವ್ಯಾಸಂಗ ಮಾಡಲು ಅವಕಾಶವಿರುತ್ತದೆ. ಇತರೆ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಓದಲು ಅಗದಿದ್ದರೆ, ಅರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3 ನೇ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಂಡು ವಿದ್ಯಾಬ್ಯಾಸ ಮುಂದುವರೆಸಬಹುದು ಎಂದು ಮಾಹಿತಿ ನೀಡಿದರು.

ಪ್ರವೇಶಾತಿ ಶುಲ್ಕದಲ್ಲಿ ವಿಶೇಷ ರಿಯಾಯಿತಿ :
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಡಿಫೇನ್ಸ್ / ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 15 ವಿನಾಯಿತಿ ಇದೆ. ಕೋವಿಡ್‌ನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ, ಟ್ರಾನ್ಸ್ ಜೆಂಡರ್/ತೃತೀಯ ಲಿಂಗಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇದೆ. ಬಿ.ಎಡ್. ಮತ್ತು ಎಂ.ಬಿ.ಎ ಹೊರತುಪಡಿಸಿ ದೃಷ್ಟಿಹೀನ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು. ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ 30 ರಿಯಾಯಿತಿ ಕೊಡಲಾಗುವುದು. ಆಸಕ್ತರು ದೂರವಾಣಿ ಸಂಖ್ಯೆ 9482603060, 8197818807, 9739402474, 7760494941, 7760546404, 9844242644, 9900787174 ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net