

ಕಲಬುರಗಿ: ಗುಲ್ಬರ್ಗ ಲೋಕಸಭೆ (ಎಸ್ಸಿ ಮೀಸಲು) ಕ್ಷೇತ್ರದಿಂದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ತಾರಾಬಾಯಿ ಭೋವಿ ಅವರ ಜಾತಿ ಪ್ರಮಾಣ ಪತ್ರ ನಕಲಿಯಾಗಿದ್ದು, ಅವರು ಎಸ್ಸಿ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕಲ್ಯಾಣ ಕರ್ನಾಟಕ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪಣ್ಣ ಒಡೆಯರಾಜ ಆರೋಪಿಸಿದರು.
ತಾರಾಬಾಯಿ ಭೋವಿ ಇವರು ಬೋಯಿ (ಬೆಸ್ತ) ಪ್ರವರ್ಗ ೧ರಲ್ಲಿ ಬರುತ್ತಿದ್ದಾರೆ. ಆದರೆ ಲೋಕಸಭೆಗೆ ಸ್ಪರ್ಧೆ ಭಯಸಿ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ. ಇದರಲ್ಲಿ ಅಧಿಕಾರಿಗಳ ತಪ್ಪಿದ್ದು, ಕೂಡಲೇ ಅವರ ನಾಮಪತ್ರ ತಿರಸ್ಕಾರ ಮಾಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬೀದರ್‌ನ ರವೀಂದ್ರ ಸ್ವಾಮಿ ಸಹ ಬೇಡ ಜಂಗಮ ಎಸ್ಸಿ ಎಂದು ನಾಮಪತ್ರ ಸಲ್ಲಿಸಿದ್ದರು. ಅದಕ್ಕೆ ಆಕ್ಷೇಪ ಸಲ್ಲಿಸಿದ್ದರಿಂದ ತಿರಸ್ಕರಿಸಲಾಗಿದೆ. ಆದರೆ ತಾರಾಬಾಯಿ ಅವರ ಪ್ರಮಾಣ ಪತ್ರ ತಿರಸ್ಕರಿಸಿಲ್ಲ. ೨೦೧೪ರಲ್ಲಿ ತಾರಾಬಾಯಿ ಪತಿ ವಿಶ್ವೇಶ್ವರಯ್ಯ ಸಹ ಸುಳ್ಳು ಪ್ರಮಾಣ ಪತ್ರ ಪಡೆದಿದ್ದರು. ಆಗ ನಾಗರಿಕ ಹಕ್ಕು, ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಅದು ಇನ್ನು ತನಿಖಾ ಹಂತದಲ್ಲಿದೆ ಎಂದು ಹೇಳಿದರು.
ಪುನಃ ಪುನಃ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಮತ್ತು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ತಕ್ಷಣ ತಪ್ಪನ್ನು ಒಪ್ಪಿಕೊಳ್ಳಬೇಕು. ಚುನಾವಣಾಧಿಕಾರಿಗಳು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಭೀಮಾಶಂಕರ ಭಂಕೂರ, ಅಣ್ಣಪ್ಪ ಸಾಳುಂಕೆ, ಗುಂಡಪ್ಪ ಸಾಳುಂಕೆ ಇತರರಿದ್ದರು.