

ಬೀದರ್: ತಾಯ್ನೆಲದ ಸೇವೆಗೆ ಯುವಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದು ಬೀದರ್ ವಾಯುಪಡೆ ತರಬೇತಿ ಕೇಂದ್ರದ ಗ್ರುಪ್ ಕ್ಯಾಪ್ಟನ್ ರಿತೀಶ್ ಶರ್ಮಾ ಸಲಹೆ ಮಾಡಿದರು.
ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕೆ ಪ್ರದೇಶದ ಮಿಲಿಟರಿ ಕ್ಯಾಂಪ್‍ನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಪ್ರಾಯೋಜಕತ್ವದಲ್ಲಿ ಗ್ಲೊಬಲ್ ಸೈನಿಕ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ 90 ದಿನಗಳ ಸೇನಾ ಭರ್ತಿ ಪೂರ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾತೃಭೂಮಿ ಸೇವೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಸೇನಾ ಹುದ್ದೆ ಶಿಸ್ತು, ಸಮಯ ಪ್ರಜ್ಞೆ ಹಾಗೂ ಬದ್ಧತೆಯನ್ನು ಕಲಿಸಿಕೊಡುತ್ತದೆ. ಸೇನೆಗೆ ಆಯ್ಕೆಯಾದವರ ಬದುಕು ಮಾದರಿ ಆಗಿರುತ್ತದೆ ಎಂದು ಹೇಳಿದರು.
ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಅಭ್ಯರ್ಥಿಗಳಿಗೆ ಗುಣಮಟ್ಟದ ಸೇನಾ ಭರ್ತಿ ಪೂರ್ವ ತರಬೇತಿ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಸಂಘದ ಪ್ರಾಯೋಜಕತ್ವದಲ್ಲಿ ಎರಡು ತಂಡಗಳಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಒಟ್ಟು 445 ಅಭ್ಯರ್ಥಿಗಳಿಗೆ ಸೇನಾ ಭರ್ತಿ ಪೂರ್ವ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಅಗ್ನಿಪಥದ ಅಗ್ನಿವೀರರ ನೇಮಕಾತಿಗೆ ನಗರದಲ್ಲಿ ನಡೆದ ರ್ಯಾಲಿಯ ದೈಹಿಕ ಪರೀಕ್ಷೆಯಲ್ಲಿ ಇಲ್ಲಿ ತರಬೇತಿ ಪಡೆದ 198 ಅಭ್ಯರ್ಥಿಗಳ ಪೈಕಿ 145 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಸಂಘದಿಂದ ಮುಂದಿನ ದಿನಗಳಲ್ಲೂ ಸೇನಾ ಭರ್ತಿ ಪೂರ್ವ ತರಬೇತಿ ಮುಂದುವರಿಸಲಾಗುವುದು. ಸರ್ಕಾರ ಇಲ್ಲವೇ ಸಮಾಜದ ನೆರವಿನಿಂದ ಈ ಭಾಗದ ಅಭ್ಯರ್ಥಿಗಳನ್ನು ಸೇನಾ ಭರ್ತಿಗೆ ಅಣಿಗೊಳಿಸಲಾಗುವುದು ಎಂದು ತಿಳಿಸಿದರು.
ಗ್ಲೊಬಲ್ ಸೈನಿಕ ಅಕಾಡೆಮಿ ಮುಖ್ಯಸ್ಥ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಸೇನೆಯಲ್ಲಿ ಬಹಳಷ್ಟು ಉದ್ಯೋಗ ಅವಕಾಶಗಳು ಇವೆ. ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಬೀದರ್‍ನಲ್ಲಿ ನಡೆದ ಸೇನಾ ರ್ಯಾಲಿಯಲ್ಲಿ ಉತ್ತರ ಕರ್ನಾಟಕದ ಸುಮಾರು 72 ಸಾವಿರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ ಬೆಳಗಾವಿ ಜಿಲ್ಲೆಯೊಂದರಿಂದಲೇ 52 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದರು. ಅಲ್ಲಿಯವರಿಗೆ ಸೇನೆ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ಅರಿವು ಇದೆ ಎಂದು ತಿಳಿಸಿದರು.
ಬಿ.ಕೆ.ಡಿ. ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು. ತರಬೇತುದಾರರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ದೇವದುರ್ಗದ ಭಾನುಪ್ರಕಾಶ, ವಿದ್ಯಾಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ವಿಮಲಾ ಸಿಕೇನಪುರ, ಗ್ಲೊಬಲ್ ಸೈನಿಕ ಅಕಾಡೆಮಿ ನಿರ್ದೇಶಕರಾದ ಸುಮೀತ್ ಸಿಂದೋಲ್, ಡಾ. ರಘು ಕೃಷ್ಣಮೂರ್ತಿ, ರಮೇಶ ಪಾಟೀಲ ಸೋಲಪುರ ಇದ್ದರು.
ಶಿಕ್ಷಕ ವಿಲ್ಸನ್ ನಿರೂಪಿಸಿದರು. ಶಿಕ್ಷಕಿ ಕಾರಂಜಿ ಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಸಂತೋಷ ವಂದಿಸಿದರು.