ತಾಯಿಯಿಂದ ಮಾತ್ರ ನಿಸ್ವಾರ್ಥ ಸೇವೆ

20 vikram 1
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಯಿ ಜೀವಂತ ದೇವತೆ. ಅವಳು ಪುಣ್ಯಕ್ಷೇತ್ರದಷ್ಟೇ ಪವಿತ್ರಳು ಎಂದು ಸೊಲ್ಲಾಪುರ ಬಿಎಡ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯೆ ಡಾ. ಚಿತ್ರಾ ನಾಯಕ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ತಾಯಿಯ ದೃಷ್ಟಿಯಲ್ಲಿ ಗಂಡು ಮಗು-ಹೆಣ್ಣು ಮಗು ಕುರಿತು ಅವರು ಉಪನ್ಯಾಸ ನೀಡಿದರು.
ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಕೆಟ್ಟ ತಾಯಿ ಇರುವುದಿಲ್ಲ. ಜಗತ್ತಿನಲ್ಲಿ ತನಗಾಗಿ ಏನೂ ಬಯಸದ ನಿಸ್ವಾರ್ಥ ಮತ್ತು ಕರುಣಾಮಯಿ ತಾಯಿ ಮಾತ್ರ. ಹೆಣ್ಣು, ಗಂಡು ಮಗು ಇರಲಿ. ತಾಯಿ ಮಕ್ಕಳ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ. ಗಂಡು ಮಗುವೇ ಶ್ರೇಷ್ಠ ಎಂಬ ಮನಸ್ಥಿತಿಯಿಂದ ಹೊರಬಂದು ಅವರಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಮಕ್ಕಳೂ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಡಾ. ರಾಜನ್ ದೇಶಪಾಂಡೆ ದತ್ತಿ ಆಶಯ ಕುರಿತು ಮಾತನಾಡಿ, ಜಗತ್ತಿನ ಅತ್ಯುತ್ತಮ ಶಿಕ್ಷಕಿ ತಾಯಿ. ಅವಳಿಗೆ ಮಕ್ಕಳ ಬಗ್ಗೆ ಇರುವ ಪ್ರೀತಿ, ವಾತ್ಸಲ್ಯ, ಮಮಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಡಾ. ರಾಜನ್ ದೇಶಪಾಂಡೆ ಅಂತಾರಾಷ್ಟ್ರೀಯ ಜನಮನ್ನಣೆ ಪಡೆಯಲು ತಾಯಿ ನೀಡಿದ ಶಿಕ್ಷಣ, ಸಂಸ್ಕಾರ ಕಾರಣ. ರಾಜನ್ 13 ವರ್ಷದಿಂದ ಸಂಘದಲ್ಲಿ ತಾಯಿ ಹೆಸರಿನಿಂದ ದತ್ತಿ ಇಟ್ಟು ಪ್ರತಿ ವರ್ಷ ಓರ್ವ ಶ್ರೇಷ್ಠ ತಾಯಿಗೆ ಸನ್ಮಾನಿಸುತ್ತಿರುವುದು ಸಂತಸದ ಸಂಗತಿ ಎಂದರು.
ಶ್ರೇಷ್ಠ ತಾಯಿ ಗೌರವಕ್ಕೆ ಭಾಜನರಾದ ಹತ್ತಿಮತ್ತೂರಿನ ಬಸಮ್ಮ ಕಬ್ಬೇರ ಅವರನ್ನು ಸನ್ಮಾನಿಸಲಾಯಿತು. ಯಮನಪ್ಪ ಕಬ್ಬೇರ, ಡಾ. ಪಲ್ಲವಿ ದೇಶಪಾಂಡೆ, ದೇಶಪಾಂಡೆ ಕಬ್ಬೇರ ಕುಟುಂಬಸ್ಥರು, ಇತರರು ಇದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net